"ನಾನೇನು ತಪ್ಪು ಮಾಡಿದೆ" ಎಂದು ಪ್ರಶ್ನಿಸುವ ಇನ್ಸಾ ಮುಸ್ತಾಕ್
ಪ್ಯಾಲೆಟ್ ಗುಂಡಿನಿಂದ ಕಣ್ಣು ಕಳೆದುಕೊಂಡ ಬಾಲಕಿ

ಜಮ್ಮುಕಾಶ್ಮೀರ, ಜು. 8: ಆ ದಿನದ ನೆನಪು 15 ವರ್ಷದ ಇನ್ಸಾ ಮುಸ್ತಾಕ್ ಲೋನೆಯನ್ನು ಬೆಚ್ಚಿಬೀಳಿಸುತ್ತದೆ. ಆಕೆಯ ಕಣ್ಣುಗಳನ್ನು ಹತ್ತಿಯಿಂದ ಮುಚ್ಚಲಾಗಿದೆ. ಆಕೆಯ ಮುಖ ಪ್ಯಾಲೆಟ್‌ಗಳಿಂದ ಸಂಪೂರ್ಣ ಘಾಸಿಗೊಂಡಿದೆ.
ಕಳೆದ ವರ್ಷ ಜುಲೈ 8ರಂದು ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನಿ ವಾನಿ ಮೃತಪಟ್ಟಿದ್ದ. ಅನಂತರ ಜುಮ್ಮಕಾಶ್ಮೀರದಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಸಂದರ್ಭ ಭದ್ರತಾ ಪಡೆ ಸಿಂಬಂದಿ ಹಾರಿಸಿದ ಪ್ಯಾಲೆಟ್ ಗುಂಡಿಗೆ ಇನ್ಸಾಳಂತೆ ಅನೇಕರು ಅಂಧರಾಗಿದ್ದಾರೆ.
ಆದರೆ, ಇನ್ಸಾಗೆ ಆದ ಗಾಯಗಳನ್ನು ಹೋಲಿಸಿದರೆ ಇತರರಿಗೆ ಆದ ಗಾಯ ತುಂಬಾ ಕಡಿಮೆ. ಇನ್ಸಾಳ ಎಕ್ಸ್‌ರೇ ಗಮನಿಸಿದರೆ ಪ್ಯಾಲೆಟ್ ಗುಂಡಿನಿಂದ ಆಗಿರುವ ಘಾಸಿಯ ತೀವ್ರತೆ ಅರಿವಾಗುತ್ತದೆ. ಪ್ಯಾಲೆಟ್‌ಗಳು ಇನ್ಸಾಳ ಕಣ್ಣು, ಮೂಗು ದವಡೆಯ ಆಳಕ್ಕೆ ಇಳಿದಿರುವುದು ಎಕ್ಸ್‌ರೇಯಲ್ಲಿ ಕಂಡು ಬಂದಿದೆ.
ಕ್ರಿಕೆಟ್‌ನ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಹಾಗೂ ಕ್ರಿಕೆಟ್ ಆಟಗಾರ್ತಿಯಾಗಿರುವ ಇನ್ಸಾ, ಇನ್ನು ಮುಂದೆ ನನಗೆ ಆಟವಾಡಲು ಸಾಧ್ಯವಾಗಲಾರದು. ಯಾಕೆಂದರೆ ನಾನು ಕುರುಡಿ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.
ಆಗ ನನ್ನ ತಾಯಿ, ಅತ್ತೆ ಹಾಗೂ ಸೋದರಿಯರು ನನ್ನೊಂದಿಗಿದ್ದರು. ನಾನು ಓದುತ್ತಿದ್ದೆ. ಹೊರಗಿನಿಂದ ದೊಡ್ಡ ಸದ್ದು ಕೇಳಿಸಿತು. ಸದ್ದು ವಾತಾವರಣದಲ್ಲಿ ಲೀನವಾದ ಬಳಿಕ ನಾನು ಕಿಟಕಿ ತೆರೆದೆ. ಇದೇ ಸಂದರ್ಭ ಸಿಡಿದ ಪ್ಯಾಲೆಟ್ ಗುಂಡು ನನ್ನ ಮುಖಕ್ಕೆ ಬಡಿಯಿತು. ನನಗೆ ಪೊಲೀಸರು ಗುಂಡು ಹಾರಿಸಲು ಕಾರಣವೇನು? ನಾನೇನು ತಪ್ಪು ಮಾಡಿದೆ ಎಂದು ಇನ್ಸಾ ಪ್ರಶ್ನಿಸಿದ್ದಾಳೆ.
ಆಕೆಯ 13 ವರ್ಷದ ಪುಟ್ಟ ತಮ್ಮ ನಿನಗೆ ನಾನು ಕಣ್ಣು ಕೊಡಲೇ ಎಂದು ಕೇಳುತ್ತಾನೆ. ಮನೆ ಮಾರಿಯಾದರೂ ನಿನಗೆ ದೃಷ್ಟಿ ಕೊಡುತ್ತೇವೆ ಎಂದು ಆಕೆಯ ಹೆತ್ತವರಾದ ಮುಸ್ತಾಕ್ ಹಾಗೂ ಅಫ್ರೋಜಾ ಹೇಳುತ್ತಿದ್ದಾರೆ. ಆದರೆ, ಆರಂಭದಲ್ಲಿ ಚಿಕಿತ್ಸೆ ನೀಡಿದ ಶ್ರೀನಗರದ ವೈದ್ಯರು ಇನ್ಸಾಳನ್ನು ಜಗತ್ತಿನ ಯಾವ ಮೂಲೆಗೆ ಕರೆದುಕೊಂಡು ಹೋದರು ಕಣ್ಣು ಬರಲಾರದು ಎಂದಿದ್ದಾರೆ. ಇನ್ಸಾ ಕಳೆದ ವರ್ಷ ಮಾರ್ಚ್‌ನಲ್ಲಿ ಹೊಸದಿಲ್ಲಿಯಲ್ಲಿ ಬುರುಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಇಲ್ಲಿನ ವೈದ್ಯರು ಕೂಡ ಇನ್ಸಾಳಿಗೆ ದೃಷ್ಟಿ ಬಾರದು ಎಂದಿದ್ದಾರೆ.
ಇದೆಲ್ಲದರ ನಡುವೆಯೂ ಇನ್ಸಾಳಿಗೆ ದೃಷ್ಟಿ ಕೊಡಿಸಬಲ್ಲೆವು ಎಂಬ ಭರವಸೆಯಲ್ಲಿ ಹೆತ್ತವರು ಇದ್ದಾರೆ.







