ಮಕ್ಕಳ ಕಸ್ಟಡಿ ಹೋರಾಟಗಳಿಗೆ ಸೂಕ್ತ ಕಾನೂನು ಅಗತ್ಯ: ಮುಖ್ಯ ನ್ಯಾಯಮೂರ್ತಿ ಖೇಹರ್
.jpg)
ಹೊಸದಿಲ್ಲಿ,ಜು.8: ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ವಿಚ್ಛೇದಿತ ದಂಪತಿಗಳು ನ್ಯಾಯಾಲಯಗಳಲ್ಲಿ ನಡೆಸುತ್ತಿರುವ ಹೋರಾಟಗಳು ರಾಷ್ಟ್ರದ ಗಡಿಗಳನ್ನು ದಾಟುತ್ತಿದ್ದು, ಇದರಿಂದಾಗಿ ಮಕ್ಕಳು ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಅಂತರ್ ದೇಶಿಯ ಮಕ್ಕಳ ಕಸ್ಟಡಿ ಪ್ರಕರಣಗಳ ಕುರಿತಂತೆ ಕಾನೂನು ರೂಪಿಸುವುದು ಅಗತ್ಯವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಶನಿವಾರ ಇಲ್ಲಿ ಹೇಳಿದರು.
ತಂದೆ ಮತ್ತು ತಾಯಿಯ ಪೈಕಿ ಯಾರ ವಶಕ್ಕೆ ಮಕ್ಕಳನ್ನು ನೀಡಬೇಕು ಎನ್ನುವುದು ಇಲ್ಲಿರುವ ಏಕೈಕ ಪ್ರಶ್ನೆ. ಆದರೆ ಅದು ಸರಳವಲ್ಲ. ಅದು ಮಗುವಿಗೆ ಅಭ್ಯಾಸವಾಗಿರುವ ಜೀವನ ವಿಧಾನಗಳನ್ನೊಳಗೊಂಡ ಸಾಂಸ್ಕೃತಿಕ ಪ್ರಶ್ನೆಯಾಗಿದೆ. ಅದು ಎರಡು ದೇಶಗಳ ಸಾರ್ವಭೌಮತೆಯ ಪ್ರಶ್ನೆಯೂ ಆಗಿದೆ ಎಂದರು.
ಅಂತರರಾಷ್ಟ್ರೀಯ ಕಾನೂನು ಸಂಘವು ಆಯೋಜಿಸಿದ್ದ ಅಖಿಲ ಭಾರತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ನ್ಯಾ.ಖೇಹರ್ ಅವರು, ಮಕ್ಕಳು ದೇಶದ ಭವಿಷ್ಯವಾಗಿದ್ದಾರೆ ಮತ್ತು ವೈವಾಹಿಕ ವಿವಾದಗಳಿಂದಾಗಿ ಅವರ ದೈಹಿಕ,ಮಾನಸಿಕ ಮತ್ತು ನೈತಿಕ ಆರೋಗ್ಯದ ರಕ್ಷಣೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಸಮಗ್ರ ಕಾನೂನೊಂದನ್ನು ರೂಪಿಸುವಂತೆ ಸರಕಾರಕ್ಕೆ ಕರೆ ನೀಡಿದರು.





