ಕೆನ್-ಬೆಟ್ವಾ ನದಿ ಜೋಡಣೆಗೆ ವಿರೋಧ

ಸಾಗರ್, ಜು. 8: ಕೆನ್ ಹಾಗೂ ಬೆಟ್ವಾ ನದಿಗಳನ್ನು ಜೋಡಿಸುವುದನ್ನು ವಿರೋಧಿಸಿ ಪನ್ನಾ ಜಿಲ್ಲೆಯ ಜನರು ಶುಕ್ರವಾರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನದಿಗಳ ಅಂತರ್ ಜೋಡಣೆ ಯೋಜನೆ ಸಮಸ್ಯೆಗೆ ಸಿಲುಕಿದೆ.
ಯೋಜನೆ ಜಿಲ್ಲೆಯಲ್ಲಿ ವಿನಾಶ ಉಂಟು ಮಾಡಲಿದೆ. ಮುಖ್ಯವಾಗಿ ಹುಲಿಗಳನ್ನು ಸಂರಕ್ಷಿಸುತ್ತಿರುವ ಪನ್ನಾ ರಾಷ್ಟ್ರೀಯ ಉದ್ಯಾನಕ್ಕೆ ಹಾನಿಯಾಗಲಿದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದ್ದಾರೆ.
ನೀರಾವರಿ, ಕುಡಿಯುವ ನೀರು ಹಾಗೂ ವಿದ್ಯುತ್ ಬೇಡಿಕೆ ಪೂರೈಸಲು 30 ನದಿಗಳನ್ನು ಜೋಡಿಸುವ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿತ್ತು ಇದರ ಭಾಗವಾಗಿ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಹರಿಯುವ ಎರಡು ನದಿಗಳನ್ನು ಜೋಡಿಸಲು ಉದ್ದೇಶಿಸಲಾಗಿತ್ತು.
ಈ ಯೋಜನೆಯ ಅಂದಾಜು ವೆಚ್ಚ 7,600 ಕೋಟಿ. ರೂ. ನೀರು ಹೆಚ್ಚು ಇರುವ ಕೆನ್ ನದಿಯಿಂದ ನೀರು ಕಡಿಮೆ ಇರುವ ಬೆಟ್ವಾ ನದಿಗೆ 221 ಕಿ.ಮೀ. ಕಾಲುವೆ ಮೂಲಕ ನೀರು ಹರಿಸಲು ನಿರ್ಧರಿಸಲಾಗಿದೆ. ಇದರಿಂದ ಬುಂಧೇಲಖಂಡ ವಲಯದ ಬರಗಾಲ ಪೀಡಿತ 6.35 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸುವುದು ಹಾಗೂ 13 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ.





