ವಲಸಿಗರ ಮರಣ ಪಯಣ

ಒಂದು ಕಡೆ ತಾವಿರುವ ನೆಲೆಯಲ್ಲಿ ಯುದ್ಧ, ನಿತ್ಯ ಗುಂಡಿನ ಮೊರೆತ, ಬಾಂಬ್ ಸ್ಫೋಟಗಳ ಅಪಾಯ.. ಮತ್ತೊಂದೆಡೆ ಹೀಗೆ ಹತ್ಯೆಗೀಡಾಗುವ ಅಪಾಯದಿಂದ ಪಾರಾಗಲು ಸುರಕ್ಷಿತ ಸ್ಥಳ ಹುಡುಕಿಕೊಂಡು ಹೋಗಬೇಕೆಂದರೂ, ಅದೂ ಸಹ ಸಾವಿನ ನೆರಳಲ್ಲೇ ಸಾಗಬೇಕಾದ ಪಯಣ..
ಸಿರಿಯಾ, ಇರಾಕ್, ಟರ್ಕಿ ಹಾಗೂ ಆಫ್ರಿಕಾ ಖಂಡದ ಲಿಬಿಯಾ, ಮೊರಾಕ್ಕೊ ಮುಂತಾದ ದೇಶಗಳ ಜನರ ಪರಿಸ್ಥಿತಿ ಇದು. ಬದುಕುಳಿಯಲು ಯೂರೋಪ್‌ನತ್ತ ವಲಸೆ ಹೋಗುತ್ತಿರುವ ಅಮಾಯಕರು ಈಗ ಸಾವಿರಾರು ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರನ್ನೆಲ್ಲಾ ಇಡಿಯಾಗಿ ಆಪೋಷನ್ ತೆಗೆದುಕೊಳ್ಳುತ್ತಿರುವುದು ಮೆಡಿಟರೇನಿಯನ್ ಸಮುದ್ರ.
ಕಳೆದ ಐದು ವರ್ಷಗಳಲ್ಲಿ ಹೀಗೆ ಸಮುದ್ರರ ಮಧ್ಯೆ ನೀರಲ್ಲಿ ಮುಳುಗಿ ಈಗಾಗಲೇ ಎಂಟು ಸಾವಿರ ಜನ ಸತ್ತಿದ್ದಾರೆ. ಭಾರತದ ಪಶ್ಚಿಮ ದಿಕ್ಕಿನಲ್ಲಿ ಸಂಭವಿಸುತ್ತಿರುವ ಈ ಘೋರ ಮನುಷ್ಯ ದುರಂತವು ಅತಿವೃಷ್ಟಿಯಿಂದಾದದ್ದಲ್ಲ. ಬರಗಾಲದ ಬವಣೆಯಿಂದಾದದ್ದೂ ಅಲ್ಲ.
ಇವೆಲ್ಲಾ ಮನುಷ್ಯ ನಿರ್ಮಿತ ದುರಂತ. ಪಶ್ಚಿಮದ ಬಲಿಷ್ಠ, ಶ್ರೀಮಂತ ದೇಶಗಳ ಲಾಭ ಬಡುಕತನ ಹಾಗೂ ದೌರ್ಜನ್ಯಗಳಿಂದ ಸೃಷ್ಟಿಯಾಗುತ್ತಿರುವ ನರಕವಿದು.
ಬಲಿಷ್ಠ ದೇಶಗಳ ಆಕ್ರಮಣಕಾರಿ ಉದ್ದೇಶವನ್ನು ಈಡೇರಿಸಲು ಈ ದೇಶಗಳಲ್ಲಿ ಹುಟ್ಟಿಕೊಂಡಿ ರುವ ಕೈಗೊಂಬೆ ಸರಕಾರಗಳು, ಮಿಲಿಷಿಯಗಳು ನಿತ್ಯ ನಿರ್ಮಿಸುತ್ತಿರುವ ಬಲಿ ಪೀಠವಿದು. ಸಿರಿಯಾದಲ್ಲಿ ಜನರಿಂದ ಚುನಾಯಿತ ಬಶರ್ ಆಲ್ ಅಸಾದ್ ಸರಕಾರದ ವಿರುದ್ಧ ಬಂಡು ಕೋರರ ಕದನಕ್ಕೆ ಅಮೆರಿಕ ಮತ್ತವರ ಮಿತ್ರಕೂಟವು ಚಿತಾವಣೆ ನೀಡುತ್ತಿದೆ.ಈ ಹಿತಾಸಕ್ತಿಗಳ ಸಂಘರ್ಷದಲ್ಲಿ ಈಗಾಗಲೇ ಮೂರುಕಾಲು ಲಕ್ಷ ಜನ ಹತರಾಗಿದ್ದಾರೆ.
ಈ ಅಂತರ್ಯುದ್ಧದಲ್ಲಿ ಅಸಾದ್‌ಗೆ ಇನ್ನೂ ಪೂರ್ಣ ಗೆಲುವು ಸಿಕ್ಕಿಲ್ಲ. ಬಂಡುಕೋರರು ಸೋತು ಸುಮ್ಮನಾಗಲು ಅಮೆರಿಕ ಬಿಡುತ್ತಿಲ್ಲ. ಆದರೆ ಸಿರಿಯಾದಲ್ಲಿ ನಿತ್ಯ ವಿಜಯಿಯಾಗುತ್ತಿ ರುವುದು ಸಾವು ಮಾತ್ರ. ಇರಾಕ್‌ನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಅಮೆರಿ ಕನ್ನರು ಸದ್ದಾಂ ಹುಸೈನ್‌ನ ಕೊಲೆ ಮಾಡಿಸಿದ ನಂತರ ಇರಾಕ್‌ನಲ್ಲಿ ನಿತ್ಯ ರಕ್ತದೋಕುಳಿ ಯಾಗುತ್ತಿದೆ.
ಅಮೆರಿಕನ್ ಕೈಗೊಂಬೆ ಸರಕಾರದ ಪರ-ವಿರುದ್ಧದ ಬಣಗಳು, ವಿವಿಧ ಬುಡಕಟ್ಟುಗಳ ಮಿಲಿಷಿಯಗಳು, ಬಾಡಿಗೆ ಭಂಟರು ಹೀಗೆ ಪ್ರತಿಯೊಬ್ಬರ ಕೈಲೂ ಈಗ ಹತ್ಯಾರುಗಳಿವೆ. ಟೈಗ್ರಿಸ್ ನದಿಯ ಒಳಹರಿವು ಈಗ ಇರಾಕಿ ನಾಗರಿಕರ ರಕ್ತದಿಂದ ತುಂಬಿ ಹರಿಯುತ್ತಿದೆ. ಸಿರಿಯಾದಲ್ಲಾಗಲಿ ಅಥವಾ ಇರಾಕಿನಲ್ಲಾಗಲಿ ಜನ ಯಾವ ಕ್ಷಣದಲ್ಲಾದರೂ ಎಲ್ಲಿಂದಲಾದರು ಬಂದೆರೆಗುವ ಸಾವಿನಿಂದ ಪಾರಾಗಬೇಕೆಂದರೆ ಅವರಿಗಿರುವ ಆಯ್ಕೆ ಬಹುಶಃ ಎರಡೇ!
ಒಂದೋ ಕೊಲ್ಲುವವರ ಬಣ ಸೇರಬೇಕು, ಇಲ್ಲಾ ಕೊಲ್ಲಲು ಬರುವವರನ್ನು ಕೊಲ್ಲುವ ಇನ್ನೊಂದು ಬಣ ಸೇರಬೇಕು.ಆದರೆ ಈ ಯಾವ ಗುಂಪು ಸೇರಿದರೂ ಬದುಕುಳಿಯುವ ಗ್ಯಾರಂಟಿ ಸಿಗುವುದಿಲ್ಲ.
ಕೊಲ್ಲಬೇಕು ಇಲ್ಲಾ ಕೊಲೆಗೀಡಾಗಬೇಕೆಂಬ ಆ ನಿತ್ಯ ನರಕದಿಂದ ಪಾರಾಗಲು ಜನ ಕಳ್ಳ ಮಾರ್ಗಗಳಲ್ಲಿ ಟರ್ಕಿ ತಲುಪಿ ಅಲ್ಲಿಂದ ಯೂರೋಪ್‌ನತ್ತ ವಲಸೆ ಹೋಗಲು ಪ್ರಯತ್ನಿಸು ತ್ತಿದ್ದಾರೆ. ಅದಕ್ಕಿರುವುದು ಒಂದೇ ದಾರಿ ಅಪಾಯಕಾರಿ ಸಮುದ್ರಯಾನ!
ಕಳೆದ ದಶಕದ ಅರಬ್ ಸ್ಪ್ರಿಂಗ್ ಥಂಡರ್ ಆಂದೋಲನದ ನಂತರ ತೈಲ ಸಂಪದ್ಭರಿತ ದೇಶಗ ಳಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳು ಸಂಭವಿಸಿದವು. ಆದರೆ ಅವೆಲ್ಲವೂ ಆಯಾ ದೇಶಗಳ ಜನ ತಮ್ಮ ಹಿತಾಸಕ್ತಿ ರಕ್ಷಿಸಬಲ್ಲ ಶಾಂತಿ ನೆಮ್ಮದಿ ತರಬಲ್ಲ ಸರಕಾರಗಳನ್ನು ಕಾಣುವ ಅವಕಾಶ ನೀಡಲಿಲ್ಲ. ಬದಲಾಗಿ ಇರುವುದರಲ್ಲಿ ಪರವಾಗಿಲ್ಲ ಎನ್ನಬಹುದಾಗಿದ್ದ ಲಿಬಿಯಾದ ಮೌಮರ್ ಗಡಾಫಿ ಸರಕಾರವನ್ನು ಉರುಳಿಸಿ 2011ರಲ್ಲಿ ಆತನನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು. ಲಿಬಿಯಾ ಒಂದು ತೈಲ ಸಂಪದ್ಬರಿತ ದೇಶ. ಗಡಾಫಿ ಅಧಿಕಾರದಲ್ಲಿದ್ದಾಗ ತೈಲ ಮಾರಾಟದ ಆದಾಯದ ಬಹುಭಾಗ ಲಿಬಿಯಾದ ಜನ ಸಾಮಾನ್ಯರ ಒಳಿತಿಗಾಗಿಯೇ ವ್ಯಯಿಸಲಾಗುತ್ತಿತ್ತು.
ಆಫ್ರಿಕಾ ಖಂಡದ ಮಾನವ ಅಭಿವೃದ್ಧಿಯ ಸೂಚ್ಯಂಕದ ಪ್ರಕಾರ ಇತರ ಎಲ್ಲಾ ದೇಶಗಳಿಗಿಂತ ಲಿಬಿಯಾ ಉತ್ತಮ ಸ್ಥಾನದಲ್ಲಿತ್ತು. ಉಚಿತ ಶಿಕ್ಷಣ, ಉಚಿತ ವಸತಿ, ಉಚಿತ ವೈದ್ಯಕೀಯ ಸೌಲಭ್ಯಗಳಿದ್ದ ಲಿಬಿಯಾದ ಜನ ತಕ್ಕಮಟ್ಟಿಗೆ ನಿರಾಳವಾಗಿದ್ದರು. ಆದರೆ ತೈಲ ವ್ಯವಹಾರ ನಡೆಸುತ್ತಿರುವ ಅಮೆರಿಕ ಮತ್ತವರ ಹಿಂಬಾಲಕ ದೇಶಗಳ ಬಹುರಾಷ್ಟ್ರೀಯ ಕಂಪನಿಗಳಿಗೆ ಲಿಬಿಯಾದ ತೈಲ ಸಂಪತ್ತಿನ ಮೇಲೆ ಕಣ್ಣಿತ್ತು. ಕರ್ನಲ್ ಗಡಾಫಿ ಅವರಿಗೆ ವ್ಯವಹಾರ ನಡೆಸಿ ಲಾಭ ದೋಚಲು ಅವಕಾಶ ನೀಡದ ಕಾರಣ ಆತನನ್ನು ಭಯೋತ್ಪಾದಕನೆಂದು ಆರೋಪಿಸಲಾಯಿತು. ಲಿಬಿಯಾದೊಳಗೆ ಭಿನ್ನ ಬಣಗಳನ್ನು ಸೃಷ್ಟಿಸಿ, ಜನಾಂಗೀಯ ಕಲಹ ವೆಬ್ಬಿಸಿ ಎಲ್ಲರ ಕೈಗೂ ಆಯುಧಗಳು ತಲುಪುವಂತೆ ಮಾಡಲಾಯಿತು. ಕೊನೆಗೆ ಅಂತರ್ಯು ದ್ಧದ ಸನ್ನಿವೇಶ ಸೃಷ್ಟಿಸಿ ಗಡಾಫಿಯನ್ನು ಮುಗಿಸಲಾಯಿತು.
ಲಿಬಿಯಾದಲ್ಲಿ ಆಗ ಶುರುವಾದ ರಕ್ತಪಾತ ಈಗಲೂ ನಿಂತಿಲ್ಲ. ಅಲ್ಲಿ ನಿತ್ಯ ಸಾವಿನದೇ ಸುದ್ದಿ. ಇಡಿ ಲಿಬಿಯಾ ದೇಶವನ್ನೇ ಸಾವನ್ನು ಉತ್ಪಾದಿಸುವ ಫ್ಯಾಕ್ಟರಿಯಂತೆ ಬದಲಿಸಿಬಿಡಲಾಗಿದೆ. ಈ ಘನಘೋರ ಸಾವಿನ ತಾಣದಿಂದ ಪಾರಾಗಿ ಬದುಕುಳಿಯಬೇಕೆಂದು ಲಿಬಿಯಾದಿಂದ ಹೊರಡುತ್ತಿರುವ ಜನರೂ ಸಹ ಸುರಕ್ಷಿತ ನೆಲೆಗಳಿಗೆ ತಲುಪುವುದು ಸುಲಭ ಸಾಧ್ಯವಲ್ಲ. ಆಫ್ರಿಕಾದ ಹಲ ದೇಶಗಳಿಗೆ ಯೂರೋಪ್ ತಲುಪಲು ಲಿಬಿಯಾ ದೇಶವೇ ನಿರ್ಗಮನದ ಬಾಗಿಲಿನ ತರಹ ಇದೆ. ಆಫ್ರಿಕಾದ ಉತ್ತರ ತುದಿಯಲ್ಲಿರುವ ಲಿಬಿಯಾ ಹಾಗೂ ಯೂರೋಪ್‌ಖಂಡದ ದಕ್ಷಿಣ ತುದಿಯಾದ ಇಟಲಿಯ ನಡುವೆ ಮೆಡಿಟರೇನಿಯನ್ ಸಮುದ್ರವಿದೆ.
ಅರಬ್ ದೇಶಗಳು, ಅಫ್ಘಾನಿಸ್ತಾನ, ಸಿರಿಯಾ ಹಾಗೂ ಇರಾಕ್‌ನ ವಲಸಿಗರು ಯೂರೋಪ್ ಪ್ರವೇಶಿಸಲು ಕಾಲ್ನಡಿಗೆಯ ಒಂದು ಭೂ ಮಾರ್ಗವಿದೆ. ಟರ್ಕಿ ಮೂಲಕ ಆಲ್ವೇನಿಯಾಗೆ ಪ್ರವೇಶಿಸಿ ಅಲ್ಲಿಂದ ಹಂಗೆರಿ, ಪೊಲೆಂಡ್, ಜರ್ಮನಿ, ಫ್ರಾನ್ಸ್‌ನತ್ತ ಚಲಿಸಬಹುದು. ಆದರೆ ಅದು ಹೆಚ್ಚು ಸಮಯ ಹಾಗೂ ಶ್ರಮ ಕೇಳುತ್ತದೆ.
ನಿರಾಶ್ರಿತ ಜನ ನೆಲೆ ಹುಡುಕುವಾಗ ಹೆಚ್ಚು ಸಮಯವನ್ನು ಪ್ರಯಾಣಕ್ಕಾಗಿ ವ್ಯಯಿಸ ಲಾರರು. ಹಾಗಾಗಿ ಇವರೆಲ್ಲಾ ಸಮುದ್ರ ಮಾರ್ಗದ ಮೂಲಕ ಟರ್ಕಿಯಿಂದ ಗ್ರೀಸ್ ತಲುಪಲು ಬಯಸುತ್ತಾರೆ. ಆಗಿಯಾನ್ ಸಮುದ್ರದಲ್ಲಿ ಚದುರಿ ಬಿದ್ದಿರುವ ಲೆಸ್‌ಬಸ್, ಕೋಸ್, ಚಿಯೋಸ್, ಲೆರೋಸ್, ಸಮೋಸ್ ದ್ವೀಪಗಳೆಲ್ಲಾ ಗ್ರೀಸ್ ದೇಶಕ್ಕೆ ಸೇರಿದಂತವು. ಟರ್ಕಿಯ ಸಮುದ್ರ ತೀರದಿಂದ ಕಳ್ಳ ದೋಣಿ ಹತ್ತಿ ಹೊರಟರೆ ಹೆಚ್ಚೆಂದರೆ ಎರಡು ಗಂಟೆಗಳ ಪ್ರಯಾಣ.
ಆಕಸ್ಮಾತ್ ದಾರಿಯ ನಡುವೆ ಸಮುದ್ರ ಮುನಿದರೆ, ಮುರುಕಲು ದೋಣಿಗಳು ಮುಳುಗಿದರೆ, ಬದುಕುಳಿಯಲು ಕೈಗೊಳ್ಳುವ ಪ್ರಯಾಣವು ಆ ಕ್ಷಣದಲ್ಲೇ ಮರಣ ಪ್ರಯಾಣವಾ ಗಬಲ್ಲದು. ಉತ್ತರ ಆಫ್ರಿಕಾ ಖಂಡದ ಲಿಬಿಯಾ, ಮೊರಾಕೊ, ಸೂಡಾನ್‌ನ ಕ್ಷೋಭೆಗಳಿಂದ ಪಾರಾಗಲು ಇಟಲಿಯತ್ತ ಹೊರಡುವ ವಲಸಿಗರಿಗೆ ಇದಕ್ಕಿಂತಾ ಹೆಚ್ಚಿನ ಆಪತ್ತು ಇದೆ.
ಲಿಬಿಯಾದಲ್ಲಿ ಮಾನವ ಕಳ್ಳ ಸಾಗಾಟ ಈಗ ಒಂದು ದೊಡ್ಡ ಬ್ಯುಸಿನೆಸ್ ಆಗಿ ಬೆಳೆದಿದೆ. ಯೂರೋಪ್‌ಗೆ ಹೋಗಬೇ ಕೆನ್ನುವ ಜನರಿಂದ ಇಪ್ಪತ್ತೈದು ಸಾವಿರ ರೂ.ಗಳಿಂದ ಒಂದೂವರೆ ಲಕ್ಷ ರೂ.ವರೆಗೂ ಶುಲ್ಕ ವಿಧಿಸುವ ಈ ಸ್ಮಗ್ಲರ್‌ಗಳು ಪ್ರಯಾಣಕ್ಕೆ ಯೋಗ್ಯವಲ್ಲದ ದೋಣಿಗಳನ್ನು ಬಳಸುತ್ತಾರೆ.
ಲಿಬಿಯಾದ ಬೆಂಗ್ಜಿ ಬಂದರಿನಿಂದ ಇಟಲಿಯ ದಕ್ಷಿಣ ತುದಿಯ ಲ್ಲಿರುವ ದ್ವೀಪ ಲ್ಯಾಂಪೆಡ್ಯುಸಾಗೆ ತಲುಪಲು ಕನಿಷ್ಠ ಒಂದೂವರೆಯಿಂದ ಎರಡು ದಿನ ಬೇಕಾಗುತ್ತದೆ. ಹತ್ತಿರತ್ತಿರ ಐದುನೂರು ಕಿಲೋಮೀಟರ್ ದೂರದ ಈ ಪ್ರಯಾಣ ಆಧುನಿಕ ಮಾನವ ನಡೆಸುತ್ತಿರುವ ಅತ್ಯಂತ ಅಪಾಯಕಾರಿ ಜಲಯಾನಗಳಲ್ಲಿ ಒಂದಾಗಿದೆ.
ಸುರಕ್ಷಿತವಲ್ಲದ, ಕಡಿಮೆ ಸಾಮರ್ಥ್ಯದ ಈ ಹಡಗುಗಳಲ್ಲಿ ಹತ್ತು ಜನರಿರಬೇಕಾದೆಡೆ ನೂರು ಜನರನ್ನು ತುಂಬಿಸಿ ಸಮುದ್ರಕ್ಕಿಳಿಸಲಾಗುತ್ತಿದೆ. ಈ ಪುಟ್ಟ ರಬ್ಬರ್ ದೋಣಿಗಳಲ್ಲಿ ಶೌಚಾಲಯಗಳಾಗಲಿ, ಕುಡಿಯುವ ನೀರಾಗಲಿ, ನಿದ್ರೆಗೆ ಸೂಕ್ತ ಸ್ಥಳವೇ ಇರುವುದಿಲ್ಲ. ಹಾಗಾಗಿ ಸಮುದ್ರಕ್ಕಿಳಿಯುವ ಮುನ್ನ ಜನ ಹೆಚ್ಚು ತಿನ್ನದಂತೆ ಸೂಚನೆ ನೀಡಲಾಗಿರುತ್ತದೆ. ಅಂತೆಯೇ ಪ್ರಯಾಣದ ಅವಧಿಯಲ್ಲೂ ಸಹ ಜನ ಇಕ್ಕಟ್ಟಾಗಿ ಒಬ್ಬರ ಮೇಲೊಬ್ಬರು ಕುಳಿತು ನೀರ ಮೇಲೆ ತೇಲುವುದನ್ನು ಬಿಟ್ಟು ಬೇರೇನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಆದರೆ ಈ ತೇಲುಯಾನದ ನಡುವೆ ರಬ್ಬರ್ ದೋಣಿಗಳು, ಮುರುಕಲು ಹಡಗುಗಳೇನಾದರೂ ಕೆಟ್ಟರೆ ಅಥವಾ ಮುರಿದರೆ ಜನ ಜಲ ಸಮಾಧಿಯಾಗುವುದು ಖಚಿತ.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹೀಗೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ ಎಂಟು ಸಾವಿರ ದಾಟಿದೆ ಎಂದು ವಿಶ್ವ ಸಂಸ್ಥೆಯ ವಲಸೆ ನಿಗಾ ಸಂಸ್ಥೆ ಅಂದಾಜು ಮಾಡಿದೆ.
ತಮ್ಮ ಮೂಲ ನೆಲೆ ತೊರೆದು ವಲಸೆ ಹೋಗುವ ಪ್ರಯತ್ನದಲ್ಲಿ ಸಮುದ್ರದಲ್ಲೇ ಮುಳುಗಿ ಮೃತಪಟ್ಟವರ ಶವಗಳು ಇಟಲಿ, ಟರ್ಕಿ ಗ್ರೀಸ್‌ನ ಸಮುದ್ರ ತೀರಗಳಿಗೆ ತೇಲಿ ಬರುತ್ತಿವೆ. ಈ ದೇಶ ಗಳಲ್ಲಿ ಈಗಾಗಲೇ ಎಪ್ಪತ್ತೈದು ಸ್ಥಳಗಳಲ್ಲಿ ಸಾಮೂಹಿಕ ಸಮಾಧಿಗಳನ್ನು ನಿರ್ಮಿಸಲಾಗಿದೆ. ಮೃತರ ಪೋಟೊ, ದೇಹದ ಮೇಲಿನ ಗುರುತುಗಳು ಹಾಗೂ ಡಿಎನ್‌ಎ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ನಂಬರ್ ನೀಡಿ ನಂತರ ಸಮಾಧಿ ಮಾಡಲಾಗುತ್ತಿದೆ.
ಸಮುದ್ರಯಾನದಲ್ಲಿ ಕಳೆದು ಹೋದ ತಮ್ಮ ಬಂಧು ಮಿತ್ರರನ್ನು ಬದುಕುಳಿ ದವರೇನಾದರೂ ಹುಡುಕಿ ಬಂದಲ್ಲಿ ಅವರ ಡಿಎನ್‌ಎ ಪಡೆದು ಹೋಲಿಸಿ ಪೋಟೊ ತೋರಿಸಿ ಪತ್ತೆ ಮಾಡಲಾಗುತ್ತದೆ. ಆಗಿಯಾನ್ ಸಮುದ್ರ ಹಾಗೂ ಮೆಡಿಟರೇನಿಯನ್ ಸಾಗರದಲ್ಲಿ ಈಗಲೂ ಅಸಂಖ್ಯ ವಲಸಿಗರ ಮೃತ ದೇಹಗಳು ತೇಲುತ್ತಾ ಅಲೆಗಳು, ಮಾರುತಗಳು ದೂಡಿದತ್ತ ಸಾಗುತ್ತಾ ಕೊನೆಗೊಮ್ಮೆ ಯಾವುದೋ ದೇಶದ ದಡ ಸೇರುತ್ತಿದ್ದಾರೆ. ಅನೇಕರು ಸಮುದ್ರದಲ್ಲೇ ಮುಳುಗಿ ಅಲ್ಲೇ ಜಲ ಸಮಾಧಿಯಾದದ್ದು ಉಂಟು. ತಮ್ಮ ನೆಲೆ-ಬದುಕು ಕಳೆದುಕೊಂಡು, ಹೀಗೆ ಪ್ರಾಣ ಕಳೆದುಕೊಂಡು ಮತ್ತ್ಯಾವುದೋ ದೇಶದಲ್ಲಿ ಕೇವಲ ನಂಬರ್ ಆಗಿ ದಾಖಲಾಗಿ ವಲಸಿಗರು ಕಣ್ಮರೆಯಾಗುತ್ತಿದ್ದಾರೆ.
ಈ ಅಪಾಯಕಾರಿ ಯಾನದಲ್ಲಿ ಬದುಕುಳಿದು ಬಂದವರು ಹೇಳುವ ಕತೆಗಳು ಘೋರವಾಗಿವೆ. ಕಾನೂನು ಬಾಹಿರ ಪ್ರಯಾಣದ ದಿನ ಹಡಗನ್ನೇರುವ ಮುನ್ನ ಹಣ ನೀಡದಿದ್ದರೆ ಅಂತವರನ್ನು ನಿರ್ದಾಕ್ಷಿಣ್ಯವಾಗಿ ಹೊರ ದೂಡಲಾಗುತ್ತದೆ. ಅನೇಕ ಬಾರಿ ಜನ ಅಸಹಾಯಕ ರಾಗಿದ್ದಲ್ಲಿ ನೂರಿನ್ನೂರು ಡಾಲರ್‌ಗಳಿಗೆ ಅವರನ್ನು ಜೀತಗಾರರನ್ನಾಗಿ ಮಾರಲಾಗುತ್ತಿದೆ. ಒಮ್ಮೆ ದೋಣಿಯು ಪ್ರಯಾಣ ಶುರು ಮಾಡಿದ ನಂತರ ಯಾರಿಗಾದರೂ ಆರೋಗ್ಯ ಕೆಟ್ಟರೆ ಅಂತವರನ್ನು ನಿರ್ದಯವಾಗಿ ಗುಂಡಿಟ್ಟು ಕೊಂದು ಸಮುದ್ರಕ್ಕೆಸೆಯಲಾಗುತ್ತದೆ. ಅಕಸ್ಮಾತಾಗಿ ಹೆಚ್ಚು ಭಾರದಿಂದ ದೋಣಿಯ ಸಮತೋಲನ ತಪ್ಪಿದಾಗ ಹಲವರನ್ನು ಜೀವಂತವಾಗಿಯೋ ಇಲ್ಲಾ ಕೊಂದೋ ಸಮುದ್ರಕ್ಕೆಸೆದು ಪ್ರಯಾಣ ಮುಂದುವರಿಸಿರುವ ಪ್ರಕರಣಗಳೂ ಮೆಡಿಟರೇನಿಯನ್‌ನಲ್ಲಿ ನಡೆದಿದೆ.
ಈ ದಶಕದಲ್ಲಿ ಏಶ್ಯಾ-ಆಫ್ರಿಕಾದಿಂದ ಯೂರೋಪ್‌ಗೆ 10 ಲಕ್ಷ ಜನ ವಲಸೆ ಹೋಗಿದ್ದಾ ರೆಂದು ಅಂದಾಜಿಸಲಾಗಿದೆ. ಇದು ಯೂರೋಪ್‌ನಲ್ಲೂ ಕ್ಷೋಭೆ ಉಂಟು ಮಾಡುತ್ತಿದೆ. ಆಯಾ ದೇಶಗಳ ಬಲಪಂಥೀಯರು ವಲಸೆ ಬರುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ ಯೂರೋಪಿಯನ್ ಯೂನಿಯನ್ ತನ್ನ ಸದಸ್ಯ ದೇಶಗಳು ತಲಾ ಇಂತಿಷ್ಟೆಂದು ವಲಸಿಗರಿಗೆ ನೆಲೆ ಕಲ್ಪಿಸಬೇಕೆಂದು ತಾಕೀತು ಮಾಡಿದೆ.
ಯೂರೋಪ್ ದೇಶಗಳಲ್ಲಿ ಪ್ರತೀ ಒಂದು ಲಕ್ಷ ಜನಸಂಖ್ಯೆಗೆ 260 ಮಂದಿ ವಲಸಿಗರಾ ಗುತ್ತಿದ್ದಾರೆ. ಯುದ್ಧ, ಹಿಂಸಾಚಾರ ನಿಲ್ಲದ ಹೊರತು ಈ ವಲಸೆಯ ದುರಂತಗಳು ನಿಲ್ಲಲಾ ರವು. ಆದರೆ ಯುದ್ಧವನ್ನು ನಿಲ್ಲಿಸುವವರು ಯಾರು ?
ಅಪಾಯಕಾರಿ ಯಾನದಲ್ಲಿ ಬದುಕುಳಿದು ಬಂದವರು ಹೇಳುವ ಕತೆಗಳು ಘೋರವಾಗಿವೆ. ಕಾನೂನು ಬಾಹಿರ ಪ್ರಯಾಣದ ದಿನ ಹಡಗನ್ನು ಏರುವ ಮುನ್ನ ಹಣ ನೀಡದಿದ್ದರೆ ಅಂತವರನ್ನು ನಿರ್ದಾಕ್ಷಿಣ್ಯವಾಗಿ ಹೊರ ದೂಡಲಾಗುತ್ತದೆ. ಅನೇಕ ಬಾರಿ ಜನ ಅಸಹಾಯಕ ರಾಗಿದ್ದಲ್ಲಿ ನೂರಿನ್ನೂರು ಡಾಲರ್‌ಗಳಿಗೆ ಅವರನ್ನು ಜೀತಗಾರರನ್ನಾಗಿ ಮಾರಲಾಗುತ್ತಿದೆ. ಒಮ್ಮೆ ದೋಣಿಯು ಪ್ರಯಾಣ ಶುರು ಮಾಡಿದ ನಂತರ ಯಾರಿಗಾದರೂ ಆರೋಗ್ಯ ಕೆಟ್ಟರೆ ಅಂಥವರನ್ನು ನಿರ್ದಯವಾಗಿ ಗುಂಡಿಟ್ಟು ಕೊಂದು ಸಮುದ್ರಕ್ಕೆಸೆಯಲಾಗುತ್ತದೆ. ಅಕಸ್ಮಾತಾಗಿ ಹೆಚ್ಚು ಭಾರದಿಂದ ದೋಣಿಯ ಸಮತೋಲನ ತಪ್ಪಿದಾಗ ಹಲವರನ್ನು ಜೀವಂತವಾಗಿಯೋ ಇಲ್ಲಾ ಕೊಂದೋ ಸಮುದ್ರಕ್ಕೆಸೆದು ಪ್ರಯಾಣ ಮುಂದುವರಿಸಿರುವ ಪ್ರಕರಣಗಳೂ ಮೆಡಿಟರೇನಿಯನ್‌ನಲ್ಲಿ ನಡೆದಿದೆ.
ಗುಲಾಮರ ವ್ಯಾಪಾರ ಮತ್ತು ವಲಸೆ
ಏಶ್ಯಾ-ಆಫ್ರಿಕಾಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ನೆಲೆ ಹುಡುಕುತ್ತಾ ಜನ ಯೂರೋಪ್ ದೇಶಗಳತ್ತ ಸಾಗುತ್ತಿರುವುದರ ಬಗ್ಗೆ ಬಿಳಿಯರ ದೇಶಗಳಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಅಲ್ಲಲ್ಲಿ ಪ್ರತಿಭಟನೆಗಳು ಆಗುತ್ತಿವೆ.
ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಹಾಲೆಂಡ್, ಸ್ಪೈನ್‌ಗಳ ವಿಪರ್ಯಾಸವೇ ನೆಂದರೆ 15ನೆ ಶತಮಾನದಿಂದ 19ನೆ ಶತಮಾನದವರೆಗೂ ಇವರೇ ಆಫ್ರಿಕಾಗೆ ಹೋಗಿ ಅಲ್ಲಿನ ಮೂಲನಿವಾಸಿಗಳನ್ನು ಸೆರೆ ಹಿಡಿದು ಯೂರೋಪ್-ಅಮೆರಿಕಗೆ ಕರೆತಂದು ಗುಲಾಮರಾಗಿ ಮಾರುತ್ತಿದ್ದರು. ಬೇಡವೆಂದರೂ ಬಿಡದೆ ಒಂದೂವರೆ ಕೋಟಿ ಜನರನ್ನು ಹೀಗೆ ಎಳೆತರಲಾಗಿತ್ತು. ಆದರೆ ಈಗ ನೆಲೆ ಹುಡುಕಿಕೊಂಡು ಆಫ್ರಿಕಾದ ಜನ ಬಂದಾಗ ಪ್ರತಿರೋಧ ವ್ಯಕ್ತವಾಗುತ್ತಿರುವುದು ವಿಪರ್ಯಾಸಕರವಾಗಿ ಕಾಣುತ್ತಿದೆ. ಆಫ್ರಿಕಾದ ಐದು ಶತಮಾನಗಳ ರಕ್ತಪಾತದ ಇತಿಹಾಸವನ್ನು ಉದ್ಘಾಟಿಸಿದವರು ಇಡೀ ಯೂರೋಪಿಯನ್ನರು ಎಂಬುದು ವಾಸ್ತವ.
ಅಲನ್ ಕುರ್ದಿಯ ಸಾವು ಸೃಷ್ಟಿಸಿದ ನೋವು
ಸಿರಿಯಾದ ಮೂರು ವರ್ಷದ ಬಾಲಕ ಅಲನ್ ಕುರ್ದಿಯ ಮೃತದೇಹ ಟರ್ಕಿಯ ಸಮುದ್ರ ತೀರವೊಂದರಲ್ಲಿ ಸಿಕ್ಕಾಗ ಅದೊಂದು ದೊಡ್ಡ ಸಂಚಲನ ಸೃಷ್ಟಿಸಿತ್ತು. ನಿಲೋಫರ್ ಡೆಮಿರ್ ಎಂಬ ಪತ್ರಕರ್ತೆ ಮರಳಿನ ಮೇಲೆ ಅಂಗಾತ ಮಲಗಿದ್ದ ಪುಟ್ಟ ಅಂಗೈ ಅಗಸದತ್ತ ಚಾಚಿದ್ದ ಕುರ್ದಿಯ ಸಾವಿನ ಪೋಟೊ ತೆಗೆದು ಹೊರ ಜಗತ್ತಿಗೆ ತೋರಿದಳು.
ಈ ಪೋಟೊ ನಂತರ ‘ಸೇವ್ ದಿ ಚಿಲ್ಡ್ರನ್’ ಹೆಸರಿನ ಆಂದೋಲನವಾಗಿ ಪರಿವರ್ತಿತವಾಯಿತು. ಆದರೆ ಸಾವಿನ ಸರಪಣಿ ತುಂಡಾಗಲೇ ಇಲ್ಲ.









