ನಾಳೆ ಟ್ವೆಂಟಿ-20 ಪಂದ್ಯದಲ್ಲಿ ಭಾರತ -ವಿಂಡೀಸ್ ಮುಖಾಮುಖಿ

ಕಿಂಗ್‌ಸ್ಟನ್, ಜು.8: ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ಏಕೈಕ ಟ್ವೆಂಟಿ-20 ಪಂದ್ಯ ಕಿಂಗ್‌ಸ್ಟನ್‌ನಲ್ಲಿ ರವಿವಾರ ನಡೆಯಲಿದೆ.
ಐದು ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನೊಂದಿಗೆ ವಿಂಡೀಸ್ ಪ್ರವಾಸ ಮುಗಿಸಲು ಯೋಚಿಸುತ್ತಿದೆ.
ಸ್ಫೋಟಕ ದಾಂಡಿಗ ಕ್ರಿಸ್ ಗೇಲ್‌ರನ್ನು ವೆಸ್ಟ್ ಇಂಡೀಸ್ ಟ್ವೆಂಟಿ-20 ತಂಡಕ್ಕೆ ಸೇರಿಸಿಕೊಂಡಿದೆ. 15 ತಿಂಗಳ ಬಿಡುವಿನ ಬಳಿಕ ಗೇಲ್ ವಿಂಡೀಸ್ ತಂಡಕ್ಕೆ ಮರಳಿದ್ದಾರೆ. ಗಾಯದಿಂದಾಗಿ ಅವರು ತಂಡದಿಂದ ದೂರವಾಗಿದ್ದರು. ಐಪಿಎಲ್‌ನಲ್ಲಿ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದ ಸದಸ್ಯರಾಗಿರುವ ಗೇಲ್ ಕಳೆದ ಐಪಿಎಲ್‌ನ ಟೂರ್ನಮೆಂಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು.
ಟ್ವೆಂಟಿ-20 ವಿಶ್ವಕಪ್ ಜಯಿಸಿದ ವೆಸ್ಟ್‌ಇಂಡೀಸ್ ತಂಡದಲ್ಲಿದ್ದ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಸುನೀಲ್ ನರೇನ್,ಮತ್ತು ಸ್ಯಾಮುಯೆಲ್ ಬದ್ರಿ ಭಾರತ ವಿರುದ್ಧ ಆಡಲಿರುವ ಟ್ವೆಂಟಿ -20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವರ್ಲ್ಡ್ ಟ್ವೆಂಟಿ-20 ಹೀರೊ ಕಾರ್ಲೊಸ್ ಬ್ರಾಥ್‌ವೈಟ್ ವಿಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದಲ್ಲಿರುವ ಎವಿನ್ ಲೂವಿಸ್ ಕಳೆದ ವರ್ಷ ಫ್ಲೋರಿಡಾದಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ 49 ಎಸೆತಗಳಲ್ಲಿ 100 ರನ್ ದಾಖಲಿಸಿ ಭಾರತದ ವಿರುದ್ಧ 1ರನ್ ಅಂತರದಲ್ಲಿ ಜಯಗಳಿಸಲು ನೆರವಾಗಿದ್ದರು.
3-1 ಅಂತರದಲ್ಲಿ ಏಕದಿನ ಸರಣಿ ಕಳೆದುಕೊಂಡಿರುವ ವಿಂಡೀಸ್‌ಗೆ ತವರಿನಲ್ಲಿ ಭಾರತಕ್ಕೆ ತಿರುಗೇಟು ನೀಡಲು ಟ್ವೆಂಟಿ-20 ಪಂದ್ಯದಲ್ಲಿ ಕೊನೆಯ ಅವಕಾಶ ಲಭಿಸಿದೆ.ಬೇಗನೆ ಸರಣಿ ಗೆಲುವಿನ ಕನಸು ಕಾಣುತ್ತಿದ್ದ ಟೀಮ್ ಇಂಡಿಯಾಕ್ಕೆ ವೆಸ್ಟ್ ಇಂಡೀಸ್ 4ನೆ ಪಂದ್ಯದಲ್ಲಿ 11 ರನ್‌ಗಳ ಅಂತರದಲ್ಲಿ ಸೋಲುಣಿಸುವುದರೊಂದಿಗೆ ಆಘಾತ ನೀಡಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿ ಸಮಬಲಗೊಳಿಸುವ ವಿಂಡೀಸ್‌ನ ಪ್ರಯತ್ನ ವಿಫಲಗೊಂಡಿತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದಕ್ಕೆ ಅವಕಾಶ ನೀಡಲಿಲ್ಲ.
ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ಕೊಹ್ಲಿ ಐದನೆ ಹಾಗೂ ಅಂತಿಮ ಪಂದ್ಯದಲ್ಲಿ ಶತಕ (ಔಟಾಗದೆ 111) ಸಿಡಿಸಿದ್ದರು. ಇದೇ ಫಾರ್ಮ್‌ನ್ನು ಮುಂದುವರಿಸುವ ಯೋಜನೆಯಲ್ಲಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿಯುತ್ತಿದ್ದರು. ರೋಹಿತ್ ಶರ್ಮ ತಂಡದಲ್ಲಿ ಇಲ್ಲದಿದ್ದರೆ ಟೀಮ್ ಇಂಡಿಯಾದ ಪರ ಕೆಲವು ಪಂದ್ಯಗಳಲ್ಲಿ ಕೊಹ್ಲಿ ಇನಿಂಗ್ಸ್ ಆರಂಭಿಕ ದಾಂಡಿಗನ ಜವಾಬ್ದಾರಿಯನ್ನು ನಿಭಾಯಿಸಿದ್ದರು. ರವಿವಾರ ವಿಂಡೀಸ್ ವಿರುದ್ಧ ಶಿಖರ್ ಧವನ್ ಅವರು ಆರಂಭಿಕ ದಾಂಡಿಗನಾಗಿ ನಾಯಕ ಕೊಹ್ಲಿಗೆ ಸಾಥ್ ನೀಡಲಿದ್ಧಾರೆ.
ತಂಡದಲ್ಲಿರುವ ಅಜಿಂಕ್ಯ ರಹಾನೆ ಕಳೆದ ಏಕದಿನ ಸರಣಿಯಲ್ಲಿ 1 ಶತಕ ಮತ್ತು 3 ಅರ್ಧ ಶತಕಗಳನ್ನು ಒಳಗೊಂಡ 336 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಯುವ ದಾಂಡಿಗ ರಿಷಭ್ ಪಂತ್‌ಗೆ ಈ ಪಂದ್ಯದಲ್ಲಿ ಅವಕಾಶ ದೊರೆಯುವುದನ್ನು ನಿರೀಕ್ಷಿಸಲಾಗಿದೆ.ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ಪಂತ್ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದೀಗ ಅವರು ಎರಡನೆ ಬಾರಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪಂತ್ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಕ್ರಿಕೆಟ್‌ನ ಭವಿಷ್ಯದ ವಿಕೆಟ್ ಕೀಪರ್ ಆಗಿ ಬೆಳೆಯುತ್ತಿದ್ದಾರೆ.
ಕುಲದೀಪ್ ಯಾದವ್ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಅವರು ಚೊಚ್ಚಲ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದಾರೆ. ವಿಂಡೀಸ್ ವಿರುದ್ಧದ ಕಳೆದ ಏಕದಿನ ಸರಣಿಯಲ್ಲಿ ಅವರು ಒಟ್ಟು 8 ವಿಕೆಟ್ ಪಡೆದಿದ್ದರು.ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು.
ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದ ಭುವನೇಶ್ವರ ಕುಮಾರ್ ಅವರು ಉಮೇಶ್ ಯಾದವ್ ಜೊತೆ ವೇಗದ ಬೌಲಿಂಗ್ ದಾಳಿಯನ್ನು ಆರಂಭಿಸಲಿದ್ದಾರೆ.ವಿಂಡೀಸ್ ತಂಡದಲ್ಲಿ ನರೇನ್ ಮತ್ತು ಬದ್ರಿ ಸ್ಪಿನ್ನರ್‌ಗಳಾಗಿದ್ದಾರೆ. ನರೇನ್ ಐಪಿಎಲ್‌ನಲ್ಲಿ ಕೆಕೆಆರ್ ಪರ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿದು ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿ ಅವರು ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಮುಹಮ್ಮದ್ ಶಮಿ.
ವೆಸ್ಟ್‌ಇಂಡೀಸ್:ಕಾರ್ಲೊಸ್ ಬ್ರಾಥ್‌ವೈಟ್(ನಾಯಕ), ಸ್ಯಾಮ್ಯುಯೆಲ್ ಬದ್ರೀ, ರಾನ್ಸ್ ಫೊರ್ಡ್ ಬಿಯಾಟನ್, ಕ್ರಿಸ್ ಗೇಲ್, ಎವಿನ್ ಲೂವಿಸ್, ಜೇಸನ್ ಮುಹಮ್ಮದ್, ಸುನೀಲ್‌ನರೇನ್, ಕೀರನ್ ಪೊಲಾರ್ಡ್, ರೊವ್ಮನ್ ಪೊವೆಲ್, ಮರ್ಲಾನ್ ಸಾಮುಯೆಲ್ಸ್, ಜೇರೊಮೆ ಟೇಲರ್, ಚಾದ್‌ವಿಕ್ ವಾಲ್ಟನ್(ವಿಕೆಟ್ ಕೀಪರ್), ಕೆಸ್ರೀಕ್ ವಿಲಿಯಮ್ಸ್.







