ಲಂಕಾ ವಿರುದ್ಧ ಝಿಂಬಾಬ್ವೆಗೆ ಜಯ

ಹಂಬನ್‌ಟೋಟಾ, ಜು.8: ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಝಿಂಬಾಬ್ವೆ 4 ವಿಕೆಟ್‌ಗಳ ಜಯ ಗಳಿಸಿದೆ.
ಮಹಿಂದ ರಾಜಪಕ್ಸೆ ಸ್ಟೇಡಿಯಂನಲ್ಲಿ ಮಳೆ ಬಾಧಿತ ಪಂದ್ಯದಲ್ಲಿ ಡಕ್‌ವರ್ತ್ ಲೂವಿಸ್ ನಿಯಮದಂತೆ ಗೆಲುವಿಗೆ 31 ಓವರ್‌ಗಳಲ್ಲಿ 219 ರನ್ ಗಳಿಸಬೇಕಿದ್ದ ಝಿಂಬಾಬ್ವೆ ತಂಡ 10 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು.
ಇದರೊಂದಿಗೆ ಝಿಂಬಾಬ್ವೆ ತಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೆ ಗೆಲುವಿನೊಂದಿಗೆ ಸರಣಿಯಲ್ಲಿ 2-2 ಸಮಬಲ ಸಾಧಿಸಿತು.ಕ್ರಿಗ್ ಎರ್ವಿನ್ ಔಟಾಗದೆ 69 ರನ್(55ಎ,8ಬೌ,1ಸಿ) ಗಳಿಸಿ ತಂಡ ಸುಲಭವಾಗಿ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಝಿಂಬಾಬ್ವೆಯ ಆರಂಭಿಕ ದಾಂಡಿಗರಾದ ಹ್ಯಾಮಿಲ್ಟನ್ ಮಸಕಝ (28) ಮತ್ತು ಸೊಲೊಮನ್ ಮೈರ್ (43) ಮೊದಲ ವಿಕೆಟ್‌ಗೆ 67 ರನ್ ಸೇರಿಸಿದರು.ವಾನಿಂಡು ಹರಸಂಗ ಡಿ ಸಿಲ್ವ (40ಕ್ಕೆ 3) ಅವರು ಝಿಂಬಾಬ್ವೆಯ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಯತ್ನಿಸಿದರು. ಮುಸಕಂದ 30 ರನ್, ಸಿಕಂದರ್ ರಝಾ 10ರನ್ ಮತ್ತು ವಾಲೆರ್ 20 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಶ್ರೀಲಂಕಾ 300: ಇದಕ್ಕೂ ಮೊದಲು ಟಾಸ್ ಜಯಿಸಿದ ಶ್ರೀಲಂಕಾ ತಂಡ ಆರಂಭಿಕ ದಾಂಡಿಗ ನಿರೋಶಾನ್ ದಿಕ್ವೆಲ್ಲಾ ಮತ್ತು ಧನುಷ್ಕ್ಕ ಗುಣತಿಲಕ ಮೊದಲ ವಿಕೆಟ್‌ಗೆ ದಾಖಲಿಸಿದ 209 ರನ್‌ಗಳ ಜೊತೆಯಾಟದ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 300 ರನ್ ಗಳಿಸಿತ್ತು.
ವಿಕೆಟ್ ಕೀಪರ್ ದಿಕ್ವೆಲ್ಲಾ ಇದೇ ಕ್ರೀಡಾಂಗಣದಲ್ಲಿ ಸತತ ಎರಡನೆ ಶತಕ ದಾಖಲಿಸಿದರು. ಅವರು ಕಳೆದ ಗುರುವಾರ ಮೂರನೆ ಏಕದಿನ ಪಂದ್ಯದಲ್ಲಿ 102ರನ್ ಗಳಿಸಿದ್ದರು. ಇಂದು 118 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 116 ರನ್ ಗಳಿಸಿದರು.
ಗುಣತಿಲಕ ಮತ್ತು ದಿಕ್ವೆಲ್ಲಾ ಶತಕ ಗಳಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ಗುಣತಿಲಕ ಅವರಿಗೆ ವಾಲೆರ್ ಶತಕ ದಾಖಲಿಸಲು ಅವಕಾಶ ನೀಡಲಿಲ್ಲ. 87 ರನ್(101ಎ, 7ಬೌ) ಗಳಿಸಿದ್ದ ಗುಣತಿಲಕ ವಾಲೆರ್ ಎಸೆತದಲ್ಲಿ ಬೌಲ್ಡ್ ಆಗಿ ಎರಡನೆ ಶತಕ ವಂಚಿತಗೊಂಡರು.
ದಿಕ್ವೆಲ್ಲಾ 116 ರನ್ ಮಾಡಿದ್ದಾಗ ಅವರನ್ನು ಎಲ್‌ಬಿಡಬ್ಲುಬಲೆಗೆ ಬೀಳಿಸುವ ಮೂಲಕ ವಾಲೆರ್ ಎರಡನೆ ವಿಕೆಟ್ ಪಡೆದರು.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ (42) ಹರಸಂಗ (ಔಟಾಗದೆ 19) ಏಳನೆ ವಿಕೆಟ್‌ಗೆ 37 ರನ್‌ಗಳ ಜೊತೆಯಾಟ ನೀಡಿದರು. ಉಪುಲ್ ತರಂಗ 22 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 50 ಓವರ್‌ಗಳಲ್ಲಿ 300/6
( ದಿಕ್ವೆಲ್ಲಾ 116, ಗುಣತಿಲಕ 87, ಮ್ಯಾಥ್ಯೂಸ್ 42; ವಾಲೆರ್ 44ಕ್ಕೆ 2)
ಝಿಂಬಾಬ್ವೆ 29.2 ಓವರ್‌ಗಳಲ್ಲಿ 219/6 (ಇರ್ವಿನ್ ಔಟಾಗದೆ 69, ಮೈರೆ 43; ಹರಸಂಗ ಡಿ ಸಿಲ್ವ 40ಕ್ಕೆ 3).
ಪಂದ್ಯಶ್ರೇಷ್ಠ: ಇರ್ವಿನ್







