ನೋಟು ರದ್ದತಿ ಸಂದರ್ಭದ ದಾಳಿಯಲ್ಲಿ ಪತ್ತೆಯಾದ ಹೊಸ ನೋಟುಗಳು ಎಷ್ಟು ಗೊತ್ತೇ?

ಹೊಸದಿಲ್ಲಿ, ಜು.9: ನೋಟು ರದ್ದತಿ ಸಂದರ್ಭ ನಡೆಸಿದ ವಿವಿಧ ದಾಳಿಗಳಲ್ಲಿ ವಶಪಡಿಸಿಕೊಂಡ 610 ಕೋಟಿ ರೂ. ಪೈಕಿ 110 ಕೋಟಿ ರೂ. ಮೌಲ್ಯದ ಹೊಸ ನೋಟುಗಳು ಪತ್ತೆಯಾಗಿವೆ.
ಯಾವುದೇ ಲೆಕ್ಕಕ್ಕೆ ಸಿಗದ ಹಣದಲ್ಲಿ 2000 ರೂ. ಹಾಗೂ 500 ರೂ. ಹೊಸ ನೋಟುಗಳು ಅಗಾಧ ಪ್ರಮಾಣದಲ್ಲಿ ಸಿಕ್ಕಿರುವುದು, ಹಳೆ ನೋಟುಗಳ ವಿನಿಮಯಕ್ಕೆ ನೀಡಿದ ಅವಕಾಶದ ಗವಾಕ್ಷಿ ದುರುಪಯೋಗವಾಗಿರುವ ಸುಳಿವು ನೀಡುತ್ತವೆ.
ಪೊಲೀಸರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಹೊಸ ನೋಟುಗಳಲ್ಲಿ ಬಹುಪಾಲು ಪೆಟ್ರೋಲ್ ಬ್ಯಾಂಕ್, ರೈಲ್ವೆ, ವಿಮಾನ ಟಿಕೆಟ್ ಬುಕ್ಕಿಂಗ್ ಹಾಗೂ ಟೋಲ್ ಪ್ಲಾಝಾಗಳ ಮೂಲಕ ಬಂದವು ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಇದಲ್ಲದೆ ಕೆಲ ಬ್ಯಾಂಕ್ ಅಧಿಕಾರಿಗಳು ಕೂಡಾ ಅಕ್ರಮವಾಗಿ ಹಳೆ ನೋಟುಗಳನ್ನು ವಿನಿಮಯ ಮಾಡಿರುವುದು ಬೆಳಕಿಗೆ ಬಂದಿದೆ.
ಹಳೆ ನೋಟುಗಳ ವಿನಿಮಯಕ್ಕೆ ಮತ್ತೆ ಅವಕಾಶ ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಸರ್ಕಾರವೇ ಮಂಡಿಸಿದ ಪ್ರತಿವಾದದಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ನೀಡಿದ ಅವಕಾಶಗಳು ದುರುಪಯೋಗವಾಗಿದ್ದು, ಹೊಸದಾಗಿ ಅವಕಾಶ ನೀಡಿದರೂ ಇದೇ ಭೀತಿ ಇದೆ ಎನ್ನುವುದು ಸರ್ಕಾರದ ವಾದ.





