ಲಕ್ಷಾಂತರ ಮೌಲ್ಯದ 235 ಮೊಬೈಲ್‌ಗಳ ಕದ್ದಾತನ ಸೆರೆ

ಮುಂಬೈ, ಜು.9: ಬೊರಿವಲಿ ಪಶ್ಚಿಮದ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ ಜಾರ್ಖಂಡ್ ಮೂಲದ 36 ವರ್ಷದ ವ್ಯಕ್ತಿಯೊಬ್ಬರನ್ನು ಕಸ್ತೂರ್ಬ ಮಾರ್ಗ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿತ ಆರೋಪಿಯಿಂದ 71.13 ಲಕ್ಷ ರೂ. ವೌಲ್ಯದ 235 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ತನ್ನ ನಾಲ್ವರು ಸಹಚರರೊಂದಿಗೆ ಸೇರಿಕೊಂಡು ರಾತ್ರಿ ವೇಳೆ ಅಂಗಡಿಯ ಮೇಲ್ಛಾವಣೆಯನ್ನು ಕೊರೆದು ಒಳಗೆ ಪ್ರವೇಶಿಸಿ ಐಫೋನ್, ಎಚ್‌ಟಿಸಿ, ಸ್ಯಾಮ್‌ಸಂಗ್ ಹಾಗೂ ಒಪ್ಪೊ ಮೊಬೈಲ್‌ಫೋನ್‌ಗಳನ್ನು ಕಳವು ಮಾಡಿದ್ದಾನೆ. ಅಂಗಡಿಯಲ್ಲಿದ್ದ 5 ಲಕ್ಷ ರೂ.ವನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.27ರಂದು ಬೆಳಗ್ಗೆ ಮಾಲಕ ಅಂಗಡಿಗೆ ಬಂದ ಬಳಿಕವೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
"ಸಿಸಿಟಿವಿಯಲ್ಲಿ ಆರೋಪಿಯ ಮುಖಚಹರೆಯನ್ನು ಗುರುತಿಸಲಾಗಿತ್ತು. ನಮ್ಮ ತಂಡ ಆರೋಪಿಯನ್ನು ಜಾರ್ಖಂಡ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ. ಆರೋಪಿಯಿಂದ 235 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಫೋನ್‌ಗಳನ್ನು ನಿರ್ಮಾಣಹಂತದ ಕಟ್ಟಡವೊಂದರಲ್ಲಿ ಅಡಗಿಸಿಡಲಾಗಿತ್ತು. ಆರೋಪಿಯ ಸಹಚರರನ್ನು ಇನ್ನಷ್ಟೇ ಬಂಧಿಸಬೇಕಾಗಿದೆ'' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







