ಸಿಪಿಎಂನ ಬಡ್ಡಿರಹಿತ ಸಹಕಾರಿ ಬ್ಯಾಂಕಿಗೆ ಸಚಿವಾಲಯದ ಅನುಮತಿ: ಶೀಘ್ರ ಅಸ್ತಿತ್ವಕ್ಕೆ

ಕಣ್ಣೂರ್,ಜು.9: ದೇಶದ ಮೊದಲ ಬಡ್ಡಿರಹಿತ ಸಹಕಾರಿ ಸಂಸ್ಥೆ ಸಿಪಿಎಂನ ನೇತೃತ್ವದಲ್ಲಿ ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕಣ್ಣೂರನ್ನು ಕೇಂದ್ರವಾಗಿಟ್ಟು ಸಹಕಾರಿ ಬ್ಯಾಂಕ್ ಕಾರ್ಯವೆಸಗಲಿದೆ. ಹಲಾಲ್ ಫಾಯಿದ ಕೊಆಪ್ ಸೊಸೈಟಿಗೆ ಠೇವಣಿ ಸಂಗ್ರಹಿಸಲು ಸಹಕಾರಿ ಸಚಿವಾಲಯ ಅನುಮತಿ ನೀಡಿದೆ.
ಠೇವಣಿ ಸಂಗ್ರಹವನ್ನು ಜುಲೈ 11ಕ್ಕೆ ಕಣ್ಣೂರಿನ ಚೇಂಬರ್ ಹಾಲ್‍ನಲ್ಲಿ ಸಚಿವ ಕೆ.ಟಿ ಜಲೀಲ್ ಉದ್ಘಾಟಿಸಲಿದ್ದಾರೆ. ಸಿಪಿಎಂನ ಅಲ್ಪಸಂಖ್ಯಾತರ ಸಾಂಸ್ಕೃತಿಕ ಸಮಿತಿ ಮೇ 25ಕ್ಕೆ ಕಣ್ಣೂರಿನಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ವಿಚಾರಗೋಷ್ಠಿಯಲ್ಲಿ ಬಡ್ಡಿರಹಿತ ಬ್ಯಾಂಕ್‍ನ ಘೋಷಣೆ ಮಾಡಲಾಗಿತ್ತು. ಒಂದೂವರೆ ತಿಂಗಳಲ್ಲಿ ಬ್ಯಾಂಕ್‍ಗೆ ಅಂತಿಮರೂಪ ನೀಡಲಾಗಿದೆ. ಹಲಾಲ್ ಫಾಯಿದ ಕೋಆಪ್ ಸೊಸೈಟಿಯ ಕಚೇರಿ ಕೂಡಲೇ ಕಣ್ಣೂರಿನಲ್ಲಿ ತೆರೆಯಲಾಗುವುದು. ಇಸ್ಲಾಮಿಕ್ ಬ್ಯಾಂಕ್‍ಗಳಂತೆ ಸಂಪೂರ್ಣ ಬಡ್ಡಿರಹಿತವಾಗಿ ಬ್ಯಾಂಕ್ ಕೆಲಸಮಾಡಲಿದೆ.
ಬಡ್ಡಿ ಬಯಸದ ಯಾರೂ ಕೂಡಾ ಹಲಾಲ್ ಫಾಯಿದ ಕೋ ಆಪ್ ಸೊಸೈಟಿಯ ಶೇರುಗಳನ್ನು ಪಡೆಯಬಹುದಾಗಿದೆ. ನಿಶ್ಚಿತ ಸಮಯಕ್ಕೆ ಠೇವಣಿಯನ್ನು ಕೂಡಾ ಇರಿಸಬಹುದಾಗಿದೆ. ನಿರ್ಮಾಣ ಕ್ಷೇತ್ರ, ಮಾಂಸ ಸಂಸ್ಕರಣೆ ಕ್ಷೇತ್ರದಲ್ಲಿ ಬ್ಯಾಂಕ್ ಹಣ ಹೂಡಿಕೆ ಮಾಡಲಿದೆ. ಫಾರ್ಮ್ ಸೌಕರ್ಯ ಸಹಿತ ಮಾಂಸ ಸಂಸ್ಕರಣೆ-ಮಾರಾಟ ಸಂಸ್ಥೆ ಹಲಾಲ್ ಸೊಸೈಟಿಯ ಪರಿಗಣನೆಯಲ್ಲಿರುವ ಇನ್ನೊಂದು ವ್ಯವಹಾರವಾಗಿದೆ. ಆರಂಭದಲ್ಲಿ ಕೇವಲ ಕಣ್ಣೂರ್ ಜಿಲ್ಲೆಯವರಿಗೆ ಮಾತ್ರ ಸೊಸೈಟಿಯ ಸದಸ್ಯರಾಗುವ ಅವಕಾಶವಿದೆ.
ಈವರೆಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರಕಿದೆ ಎಂದು ಸೊಸೈಟಿಯ ಚೀಫ್ ಪ್ರಮೋಟರ್ ಮತ್ತು ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಂ.ಶಾಜರ್ ತಿಳಿಸಿದ್ದಾರೆ. ಒ.ವಿ. ಮುಸ್ತಫಾ, ಕಾತ್ತಂಡಿ ರಝಾಕ್, ಅಬ್ದುಲ್ ಕರೀಂ, ಪಿ.ಕೆ. ಝಾಹಿರ್ ಮುಂತಾದವರಿರುವ ಹನ್ನೊಂದು ಮಂದಿ ಹಲಾಲ್ ಫಾಯಿದಾ ಕೋ ಆಪ್‍ಸೊಸೈಟಿಯ ಪ್ರವರ್ತಕರಾಗಿದ್ದಾರೆ.







