ಭಟ್ಕಳ: ಮನೆಗೆ ನುಗ್ಗಿ ಕಳವು
.jpg)
ಭಟ್ಕಳ, ಜು.9: ನಗರದ ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ಗುಡ್ಲಕ್ ರಸ್ತೆಯ 6ನೇ ಕ್ರಾಸ್ ನ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, 24ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೈಯ್ಯದ್ ಮುಹಸಿನ್, ಸೈಯ್ಯದ್ ಇಕ್ಬಾಲ್ ರ ಮಾಲಿಕತ್ವದ ಈ ಮನೆಯಲ್ಲಿ ಕಳುವುಗೈದ ಆಭರಣಗಳ ಒಟ್ಟು ಮೌಲ್ಯ 24,64,800 ಎಂದು ಅಂದಾಜಿಸಲಾಗಿದೆ. ಇದರಲ್ಲಿ ಒಂದು ಲಕ್ಷ ಮೌಲ್ಯದ ಡೈಮಂಡ್, 12ಲಕ್ಷ ರೂ. ನಗದು ಸೇರಿದೆ.
ಲಭ್ಯ ಮಾಹಿತಿಯಂತೆ, ಜು.3ರ ಮಧ್ಯಾಹ್ನ 3.30 ರಿಂದ ಜು.8 ರ ಬೆಳಿಗ್ಗೆ 9.00 ಗಂಟೆಯೊಳಗೆ ಈ ಘಟನೆ ನಡೆದಿರಬಹುದು ಎಂದು ಅನುಮಾನಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಮನೆಯ ಮಾಲಿಕರು ಮನೆಗೆ ಬೀಗ ಹಾಕಿ ಬೇರೆ ಕಡೆ ಹೋಗಿದ್ದರು ಎನ್ನಲಾಗಿದೆ. ಇದರ ಲಾಭ ಪಡೆದ ಕಳ್ಳರು ಯಾರೂ ಇಲ್ಲದ ಸಮಯದಲ್ಲಿ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮೀಣ ಠಾಣಾ ಪಿಎಸೈ ಮಂಜಪ್ಪ ಹಾಗೂ ಸಿಪಿಐ ಸುರೇಶ ನಾಯಕ ಕೂಡಲೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.







