ಬಂಟ್ವಾಳದಲ್ಲಿ ಆವರಿಸಿದ ಸ್ಮಶಾನ ಮೌನ: ಜನಸಂಚಾರವಿಲ್ಲದೆ ನಿಶಬ್ದಗೊಂಡ ಬಿ.ಸಿ.ರೋಡ್, ಕೈಕಂಬ
ಎಲ್ಲೆಡೆ ಖಾಕಿ ಕಾವಲು; ಮನೆಯಿಂದ ಹೊರ ಬರಲು ಹೆದರುತ್ತಿರುವ ಜನರು

ಬಹುತೇಕ ಅಂಗಡಿಗಳು ಬಂದ್
ಕಲ್ಲಡ್ಕ, ಮೆಲ್ಕಾರ್, ಫರಂಗಿಪೇಟೆಯಲ್ಲಿ ಸಹಜ ಸ್ಥಿತಿ
ಬಂಟ್ವಾಳ, ಜು. 9: ಶರತ್ ಮಡಿವಾಳರ ಮೃತದೇಹದ ಮೆರವಣಿಗೆ ಸಂದರ್ಭದಲ್ಲಿ ಬಿ.ಸಿ.ರೋಡ್, ಕೈಕಂಬದಲ್ಲಿ ನಡೆದ ಕಲ್ಲು ತೂರಾಟ, ದಾಂಧಲೆ ಯಿಂದಾಗಿ ರವಿವಾರ ಬಂಟ್ವಾಳ ತಾಲೂಕಿನ ಪ್ರಮುಖ ವ್ಯವಹಾರಿಕ ಕೇಂದ್ರಗಳಲ್ಲಿ ಸ್ಮಶಾನ ಮೌನ ಆವರಿಸಿದೆ.
ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿ.ಸಿ.ರೋಡ್, ಕೈಕಂಬದಲ್ಲಿ ನಿರ್ಮಾಣವಾಗಿರುವ ಆತಂಕದ ವಾತಾವರಣ ಇನ್ನೂ ಮರೆಯಾಗಿಲ್ಲ. ಜನಸಂಚಾರ ತೀರಾ ಕಡಿಮೆಯಾಗಿದ್ದರಿಂದ ಇಡೀ ಪೇಟೆ ರವಿವಾರ ನಿಶಬ್ದವಾಗಿದೆ.
ರವಿವಾರ ರಜಾ ದಿನಾ ಆದರೂ ಬಿ.ಸಿ.ರೋಡಿನಲ್ಲಿ ಕೆಲವು ಅಂಗಡಿಗಳನ್ನು ಹೊರೆತುಪಡಿಸಿ ಹೆಚ್ಚಿನ ಅಂಗಡಿಗಳು ತೆರೆದಿರುತ್ತವೆ. ಆದರೆ ಇಂದು ಬೆಳಗ್ಗೆಯಿಂದಲೇ ಹೆಚ್ಚಿನ ಅಂಗಡಿಗಳು ಬಂದ್ ಆಗಿದ್ದವು. ಜನರಿಲ್ಲದೆ ವ್ಯಾಪಾರ ಇಲ್ಲದಿರುವುದರಿಂದ ಮಧ್ಯಾಹ್ನದ ಬಳಿಕ ಇನ್ನಷ್ಟು ಅಂಗಡಿಗಳು ಬಂದ್ ಆದವು.
ಬಂಟ್ವಾಳ ತಾಲೂಕಿನಲ್ಲಿ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಅಹಿತಕರ ಘಟನೆಯ ಮೂಲವಾದ ಕಲ್ಲಡ್ಕ ಸಹಜ ಸ್ಥಿತಿಯಲ್ಲಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ತೆರದಿದ್ದವು. ಆದರೆ ಸಾರ್ವಜನಿಕರ ಓಡಾಟ ವಿರಳವಾಗಿದೆ. ಹಾಗೆಯೇ ಸಹಜ ಸ್ಥಿತಿಯಲ್ಲಿರುವ ಮೆಲ್ಕಾರ್, ಫರಂಗಿಪೇಟೆ, ಬಂಟ್ವಾಳ ಪೇಟೆಯಲ್ಲೂ ಜನಸಂಚಾರ ಕಡಿಮೆಯಾಗಿದೆ. ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡ್, ಕೈಕಂಬ, ತುಂಬೆ, ಮಾರಿಪಳ್ಳ, ಫರಂಗಿಪೇಟೆಯಲ್ಲಿ ಎಲ್ಲೆಲ್ಲೂ ಖಾಕಿ ಕಾಣುತ್ತಿದೆ. ಪೊಲೀಸ್ ಭದ್ರತೆ ಇದ್ದರೂ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಆಟೋ ರಿಕ್ಷಾ, ಟ್ಯಾಕ್ಸಿ, ಗೂಡ್ಸ್ ಟೆಂಪೂಗಳ ಸಂಖ್ಯೆಯೂ ಕಡಿಮೆ ಇದೆ.







