ಮುಲ್ಕಿ: ಹೊಳೆಯಲ್ಲಿ ಮುಳುಗಿ ಮೂವರು ಮೃತ್ಯು

ಮುಲ್ಕಿ, ಜು.9: ಸ್ಥಾನಕ್ಕೆಂದು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ಸಂಜೆ ಮುಲ್ಕಿ ಸಮೀಪದ ಮಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಮಟ್ಟು ನಿವಾಸಿ ಮಹೇಶ, ಉಳ್ಳಾಲ ಸೋಮೇಶ್ವರ ನಿವಾಸಿ ಕಿಶೋರ್, ಮದ್ದೂರು ನಿವಾಸಿ ಅಕ್ಷಯ್ ಮೃತಪಟ್ಟವರೆಂದು ತಿಳಿದು ಬಂದಿದೆ.
ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 8 ಮಂದಿಯ ತಂಡ ಸ್ಥಾನಕ್ಕೆಂದು ಮುಲ್ಕಿ ಶಾಂಭವಿ ನದಿಯ ಮಟ್ಟು ಎಂಬಲ್ಲಿಗೆ ಬಂದಿದ್ದರು.
ಎಲ್ಲರೂ ಸ್ಥಳೀಯ ನಿವಾಸಿ ಮೃತ ಮಹೇಶನ ಸ್ನೇಹಿತರಾಗಿದ್ದರು. ಇವರೆಲ್ಲರೂ ಒಂದೇ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಇವರಲ್ಲಿ ಕೆಲವರು ನೀರಿಗೆ ಇಳಿದು ಸ್ನಾನ ಮಾಡುತ್ತಿರೆ, ಇನ್ನು ಕೆಲವರು ನದಿಯ ದಡದಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಮದ್ದೂರು ನಿವಾಸಿ ಅಕ್ಷಯ್ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗುವುದನ್ನು ಗಮನಿಸಿದ ಕಿಶೋರ್ ಆತನ್ನು ರಕ್ಷಿಸಲೆಂದು ತೆರಳಿದ್ದಾನೆ. ಈ ವೇಳೆ ಅವರಿಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿರುವುದನ್ನು ನದಿಯ ದಡದಲ್ಲಿದ್ದ ಮಹೇಶ ಗಮನಿಸಿದ್ದು, ಪಕ್ಕದಲ್ಲಿದ್ದ ದೋಣಿಯ ಮೂಲಕ ತೆರಳಿ ರಕ್ಷಿಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಆದರೆ, ನದಿಯ ಮೇಲ್ಭಾಗದಲ್ಲಿ ನೀರು ಸಾಮಾನ್ಯವಾಗಿ ಗೋಚರಿಸುತ್ತಿದ್ದು, ಒಳಹರಿವಿನಲ್ಲಿ ಸುಳಿ ಇದ್ದ ಕಾರಣ ಸ್ನೇಹಿತರ ಜೊತೆ ರಕ್ಷಿಸಲೆಂದು ತೆರಳಿದ್ದ ಮಹೇಶನೂ ನೀರು ಪಾಲಾದ ಎನ್ನಲಾಗಿದೆ.
ಮುಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಈಜುಗಾರರು ಹಾಗೂ ಆಪತ್ಭಾಂದವ ಆಂಬ್ಯುಲೆನ್ಸ್‌ನ ಆರೀಫ್ ಪಡುಬಿದ್ರೆ ಅವರ ಸಹಕಾರದೊಂದಿಗೆ ಮೂರೂ ಮಂದಿಯ ಮೃತದೇಹಗಳನ್ನು ಮೇಲೆತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ನಗರ ಪಂಚಾಯತ್ ಸದಸ್ಯ ಪುತ್ತುಬಾವು, ಅಶೋಕ್ ಪೂಜಾರ್ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮೇಲೆತ್ತುವ ಕಾರ್ಯದಲ್ಲಿ ಸಹಕರಿಸಿದರು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ಬಳಿಕ ಮೃತದೇಹಗಳನ್ನು ಮುಲ್ಕಿ ಸಮುದಾಯ ಆರೋಗ್ಯ ಕೆಂದ್ರಕ್ಕೆ ರವಾನಿಸಲಾಗಿದ್ದು, ಮೃತರ ಪೋಷಕರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಗುರುತು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.







