ಭಾರತದ ಸ್ವರ್ಣೋದ್ಯಮದ ಮೇಲೆ ಜಿಎಸ್‌ಟಿ ಪರಿಣಾಮವೇನು?

ಹೊಸದಿಲ್ಲಿ,ಜು.9: ಜ.1ರಿಂದ ಜಾರಿಗೊಂಡಿರುವ ನೂತನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಬಗ್ಗೆ ಜನರಲ್ಲಿ ಇನ್ನೂ ವಿಭಿನ್ನ ಅಭಿಪ್ರಾಯಗಳಿವೆ. ಜಿಎಸ್‌ಟಿಯ ನಿಜವಾದ ಪರಿಣಾಮಗಳು ಗೊತ್ತಾಗಲು ಇನ್ನಷ್ಟು ಕಾಲಾವಕಾಶ ಅಗತ್ಯವಿದೆ.
ಭಾರತೀಯರ ಪಾಲಿಗೆ ಪ್ರಮುಖ ಹೂಡಿಕೆಯಾಗಿರುವ ಚಿನ್ನದ ಮೇಲೆ ಜಿಎಸ್‌ಟಿ ಯಾವ ಪರಿಣಾಮ ಬೀರಬಹುದು ಎಂಬ ಬಗ್ಗೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಯೊಂದನ್ನು ಮಂಡಿಸಿದೆ.
ಬೇಡಿಕೆ: 2017ರಲ್ಲಿ ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ 650 ರಿಂದ 750 ಟನ್‌ಗಳಷ್ಟಿದ್ದು, 2020ರ ವೇಳೆಗೆ ಇದು 850-950 ಟನ್‌ಗಳಿಗೇರಬಹುದು.
ಪಾರದರ್ಶಕತೆ: ಚಿನ್ನದ ಮೇಲೆ ವಿಧಿಸಲಾಗಿರುವ ಶೇ.3 ಜಿಎಸ್‌ಟಿಯು ಹಳದಿ ಲೋಹದ ಪೂರೈಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಿದೆ.
ಸರಕಾರಗಳ ಆದಾಯ: ಜಿಎಸ್‌ಟಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದಾಯಗಳಲ್ಲಿ ಒಂದು ಲಕ್ಷ ಕೋಟಿ ರೂ.ಏರಿಕೆಯಾಗುವ ನಿರೀಕ್ಷೆಯಿದೆ.
ಶುದ್ಧತೆ: ಜಿಎಸ್‌ಟಿಯಿಂದಾಗಿ ಹೆಚ್ಚು ಶುದ್ಧತೆಯ ಚಿನ್ನದ ದರದಲ್ಲಿ ಕಡಿಮೆ ಶುದ್ಧತೆಯ ಚಿನ್ನವನ್ನು ಮಾರಾಟ ಮಾಡಿ ಗ್ರಾಹಕರನ್ನು ವಂಚಿಸುವುದು ವ್ಯಾಪಾರಿಗಳಿಗೆ ಕಷ್ಟವಾಗಲಿದೆ.
ಕಾನೂನು ಬಾಧ್ಯತೆಗಳು: ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದ ಚಿನ್ನಾಭರಣ ಸರಣಿ ಮಳಿಗೆಗಳು ದೇಶದ ಚಿನ್ನ ಮಾರುಕಟ್ಟೆಯಲ್ಲಿ ಕೇವಲ ಶೇ.30ರಷ್ಟು ಪಾಲು ಹೊಂದಿವೆ. ಜಿಎಸ್‌ಟಿ ಜಾರಿಗೆ ಬಂದಿರುವುದರಿಂದ ಕಳ್ಳ ಮಾರುಕಟ್ಟೆಯನ್ನು ನಿರ್ವಹಿಸುವುದು ಮಾರಾಟಗಾರರಿಗೆ ಕಷ್ಟವಾಗಲಿದೆ. ಹೀಗಾಗಿ ಚಿನ್ನದ ವ್ಯವಹಾರ ಸಂಪೂರ್ಣವಾಗಿ ಕಾನೂನುಬದ್ಧವಾಗಿರಲಿದೆ.







