ಶಾಂತಿ ಕಾಪಾಡಲು ಆಗದಿದ್ದರೆ ರಾಜೀನಾಮೆ ಕೊಡಿ: ಕೇಂದ್ರ ಸಚಿವ ಸದಾನಂದಗೌಡ
‘24 ಗಂಟೆಯೊಳಗೆ ಕೇಂದ್ರ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ತರಲಿದೆ’

ಬೆಂಗಳೂರು, ಜು. 9: ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಲಿ. ಕೇಂದ್ರ ಸರಕಾರ ಇಪ್ಪತ್ತ್ನಾಲ್ಕು ಗಂಟೆಯೊಳಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ತರಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎರಡು ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದ ಸಿಎಂ ಸಿದ್ದರಾಮಯ್ಯ ಬಿಜೆಪಿ, ಆರೆಸೆಸ್ಸ್ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.
ಸಚಿವರೇ ಇಲ್ಲ: ರಾಜ್ಯದಲ್ಲಿ ಗೃಹ ಇಲಾಖೆಗೆ ಸಚಿವರೇ ಇಲ್ಲ. ಗೃಹ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡಿದ್ದರೂ, ಅವರಿಗೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ, ಕೇಂದ್ರದಿಂದ 24ಗಂಟೆಯೊಳಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸುವ್ಯವಸ್ಥೆ ಜಾರಿ ತರಲಿದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರಕಾರಗಳ ಹೊಣೆ. ಕೇಂದ್ರ ಸರಕಾರ ಒಂದೇ ಒಂದು ಸಣ್ಣ ನಿರ್ದೇಶನ ನೀಡಿದರೂ ಕೇಂದ್ರವು ಎಲ್ಲ ವಿಷಯದಲ್ಲಿ ಮೂಗು ತೂರಿಸುತ್ತದೆ ಎಂದು ಆರೋಪ ಮಾಡುತ್ತೀರಿ. ಜನರಿಗೆ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಆಡಳಿತದಲ್ಲಿ ಇರುವುದಾದರೂ ಏಕೆ ಎಂದು ಅವರು ಪ್ರಶ್ನಿಸಿದರು.
ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡಕ್ಕೆ ಸಿಎಂ ಭೇಟಿ ನೀಡಿದ್ದರು. ಈ ವೇಳೆ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯನ್ನೂ ನಡೆಸಲಿಲ್ಲ. ಬೆಂಗಳೂರಿಗೆ ಬಂದು ಮಾಧ್ಯಮಗಳಿಗೆ ಹೇಳಿಕೆಯನ್ನಷ್ಟೇ ನೀಡಿದರು. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಂಘ ಪರಿವಾರದ ವಿರುದ್ಧ ಆರೋಪ ಸಲ್ಲ ಎಂದು ಟೀಕಿಸಿದರು.
ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಅವರೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸಾಮಾನ್ಯ ಜನರನ್ನು ಉದ್ವಿಗ್ನಗೊಳಿಸುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಹೇಗೆ ನಡೆದುಕೊಳ್ಳಬೇಕೆಂದು ತಿಳಿದುಕೊಳ್ಳಬೇಕು. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಬೇಡಿ ಎಂದು ಹೇಳಿದರು.







