ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇಲ್ಲ: ಎಚ್.ಡಿ.ದೇವೇಗೌಡ
‘ಎಚ್‌ಡಿಕೆ ಬಳಿ ಪ್ರಜ್ವಲ್ ರೇವಣ್ಣ ಕ್ಷಮೆಯಾಚನೆ’

ಬೆಂಗಳೂರು, ಜು.9: ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಉದ್ವೇಗದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಬಗ್ಗೆ ಮಾತನಾಡಿದ್ದು, ಇನ್ನೆರಡು ದಿನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿ ಕ್ಷಮೆ ಯಾಚಿಸಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರವಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಸೂಟ್‌ಕೇಸ್ ಸಂಸ್ಕೃತಿ ಇಲ್ಲ. ಆದರೆ, ಪ್ರಜ್ವಲ್ ರೇವಣ್ಣ ಅವರು ಉದ್ವೇಗದಲ್ಲಿ ಮಾತನಾಡಿದ್ದು, ತಮ್ಮ ಬಳಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ಸದ್ಯದಲ್ಲಿಯೇ ಎಚ್.ಡಿ.ಕುಮಾರಸ್ವಾಮಿ ಅವರ ಬಳಿಯೂ ಕ್ಷಮೆ ಕೇಳಲಿದ್ದಾರೆ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಪ್ರಜ್ವಲ್ ರೇವಣ್ಣ ಅವರು ಶ್ರಮಿಸಿದ್ದಾರೆ. ಆದರೆ, ಪ್ರಜ್ವಲ್ ಅವರು ತಮ್ಮ ಬಳಿ ಬಂದಾಗ ಉದ್ವೇಗದಲ್ಲಿ ಈ ರೀತಿಯಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಜ್ವಲ್ ಅವರು ಈ ಪಕ್ಷದಿಂದ ಉಚ್ಚಾಟಿಸಿದರೂ ಬೇಸರಿಸಿಕೊಳ್ಳುವುದಿಲ್ಲ. ಹಾಗೂ ಸಾಮಾನ್ಯ ಕಾರ್ಯಕರ್ತನ ಕೆಲಸವನ್ನು ನೀಡಿದರು ಪಕ್ಷಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದಲ್ಲಿ ಯಾವುದೇ ಸೂಟ್‌ಕೇಸ್ ಸಂಸ್ಕೃತಿ ಇಲ್ಲ. ಹೀಗಾಗಿಯೇ ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ, ಇತರೆ ಪಕ್ಷಗಳು ಸೂಟ್‌ಕೇಸ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿವೆ ಎಂದು ಕಿಡಿಕಾರಿದರು. ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭಾ ಸಾರ್ವತ್ರಿಕ ಚುನಾವಣೆ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದಲ್ಲಿಯೇ ನಡೆಯಲಿದೆ. ಅಲ್ಲದೆ, ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರೂ ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಜನರ ಸಮಸ್ಯೆಯನ್ನು ಆಲಿಸುತ್ತಿದ್ದಾರೆ. ಅಲ್ಲದೆ, ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ನಾಲ್ಕೈದು ತಂಡವನ್ನು ರಚಿಸಿ ಪಕ್ಷವನ್ನು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು ಎಂದು ಹೇಳಿದರು.
ಜೆಡಿಎಸ್ ಪಕ್ಷ ಸಾಮಾಜಿಕ ನ್ಯಾಯವನ್ನು ಒದಗಿಸುವ ದೃಷ್ಠಿಯಿಂದ ಎಲ್ಲ ಜನಾಂಗದ ಉತ್ಸಾಹಿ ಮುಖಂಡರಿಗೆ ಟಿಕೆಟ್ ನೀಡಲಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.







