ಗೋಖಲೆ ಶಿಕ್ಷಣ ಸಂಸ್ಥೆ ಕಟ್ಟಡ ತೆರವು ಖಂಡಿಸಿ ಜು.15ಕ್ಕೆ ಬಿಎಸ್ಪಿ ಪ್ರತಿಭಟನೆ
ಬೀದರ್, ಜು. 9: ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿದ್ದ ಗೋಖಲೆ ಶಿಕ್ಷಣ ಸಂಸ್ಥೆಯ ಕಟ್ಟಡವನ್ನು ಏಕಾಏಕಿ ತೆರವುಗೊಳಿಸಿರುವುದರ ಹಿಂದೆ ಶಾಸಕ ರಾಜಶೇಖರ್ ಪಾಟೀಲ್ ಕೈವಾಡವಿದೆ ಎಂದು ಬಹುಜನ ಸಮಾಜ ಪಕ್ಷದ ಉಪಾಧ್ಯಕ್ಷ ಸೈಯದ್ ಜುಲ್ಫಿಕರ್ ಹಾಶ್ಮಿ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ರಾಜಶೇಖರ್ ಪಾಟೀಲ್ ಕುಮ್ಮಕ್ಕಿನಿಂದಲೇ ಅಧಿಕಾರಿಗಳು ಪರಿಶಿಷ್ಟರಿಗೆ ಸೇರಿದ ಶಿಕ್ಷಣ ಸಂಸ್ಥೆಯನ್ನು ಯಾವುದೇ ಮುನ್ಸೂಚನೆ ನೀಡದೆ ನೆಲಸಮ ಮಾಡಿದ್ದು, 250 ಮಕ್ಕಳನ್ನು ಬೀದಿಪಾಲು ಮಾಡಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ಇಲವಾಗಿದೆ. ಇದಕ್ಕೆ ಪರಿಶಿಷ್ಟರ ಶಿಕ್ಷಣ ಸಂಸ್ಥೆ ನೆಲಸಮ ಮಾಡಿರುವುದೇ ಸಾಕ್ಷಿ ಎಂದ ಜುಲ್ಫಿಕರ್ ಹಾಶ್ಮಿ, ಈ ಸಂಬಂಧ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.
ಜು.15ಕ್ಕೆ ಪ್ರತಿಭಟನೆ: ಶಾಸಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಯಾವುದೇ ಮನ್ಸೂಚನೆ ನೀಡದೆ 10 ಕೊಣೆಗಳಿದ್ದ ಶಿಕ್ಷಣ ಸಂಸ್ಥೆಯನ್ನು ನೆಲಸಮ ಮಾಡಲಾಗಿದೆ. ಇದರಿಂದ 25ಲಕ್ಷ ರೂ.ನಷ್ಟ ಸಂಭವಿಸಿದೆ. ಈ ಕ್ರಮವನ್ನು ಖಂಡಿಸಿ ಜು.15ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಅಂಕುಶ ಗೋಖಲೆ ಹೇಳಿದರು.
ಪ್ರತಿಭಟನೆಯಲ್ಲಿ ಬಿಎಪ್ಪಿ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹೇಶ್, ಹಿರಿಯ ಮುಖಂಡರಾದ ಮಾರಸಂದ್ರ ಮುನಿಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ವಿಠ್ಠಲ್ ನಾಯಕ್, ವಹೀದ್ ಲಖನ್, ಲಕ್ಷ್ಮಣರಾವ್ ಹಾಜರಿದ್ದರು.







