‘ಕೇಂದ್ರೀಯ ವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿ’

ಬೆಂಗಳೂರು, ಜು. 9: ನಾವು ಕಲಿತ ಶಿಕ್ಷಣ ಸಂಸ್ಥೆಯನ್ನು ‘ಗೀವ್ ಬ್ಯಾಕ್ ಟು ಕೆ.ವಿ’ ಯೋಜನೆ ಮೂಲಕ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ ಎಂದು ಕೇಂದ್ರೀಯ ವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘಗಳ ಒಕ್ಕೂಟದ ಸಂಸ್ಥಾಪಕ ಸದಸ್ಯ ಕನ್ವಲ್ಜೀತ್ ಸಿಂಗ್ ಹೇಳಿದ್ದಾರೆ.
ರವಿವಾರ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ನೂರಾರು ಹಳೆಯ ವಿದ್ಯಾರ್ಥಿಗಳು ಶಾಲೆಯಿಂದ ತಾವು ಪಡೆದು ಶಾಲೆಗೆ ವಾಪಸ್ ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹಾಕಿ ಅವರನ್ನು ಉನ್ನತ ಮಟ್ಟಕ್ಕೆ ಏರಿಸಿ ಅವರ ಕನಸನ್ನು ಸಾಕಾರಗೊಳಿಸಲು ಉದ್ದೇಶಿಸಲಾಗಿದೆ. ಕೇಂದ್ರೀಯ ವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳ ಸಂಘಗಳ ಒಕ್ಕೂಟವನ್ನು ಆರಂಭಿಸುವುದು ಒಂದು ಸವಾಲಿನ ಕೆಲಸ.
ಆದರೆ, ಇತ್ತೀಚೆಗೆ ನಡೆದ ಅಂತರ ಕೇಂದ್ರೀಯ ವಿದ್ಯಾಲಯಗಳ ಕ್ರಿಕೆಟ್ ಮತ್ತು ಇತರೆ ಕ್ರೀಡಾಕೂಟಗಳು ಇದಕ್ಕೆ ಪ್ರೇರಕ ಶಕ್ತಿಯಾದವು. ಇದಕ್ಕೆ ಪೂರಕವಾಗಿ ಒಕ್ಕೂಟವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಒಕ್ಕೂಟದ ಸದಸ್ಯ ಕಾರ್ತಿಕ್ ಮಾತನಾಡಿ, ಈ ವರ್ಷ ಸುಮಾರು 50 ವಿದ್ಯಾರ್ಥಿಗಳು ಕ್ರೀಡಾಪಟುಗಳಾಗಿ ಹೊರಹೊಮ್ಮುತ್ತಿದ್ದಾರೆಂಬ ವಿಶ್ವಾಸ ಒಕ್ಕೂಟಕ್ಕಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ನಡೆಸಿದ ಸಭೆಗಳಲ್ಲಿ ಪ್ರತಿ ವಿದ್ಯಾಲಯದಿಂದ ಕನಿಷ್ಟ ನಾಲ್ಕು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿದ್ದೇವೆ. ಅವರಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡುವ ಜವಾಬ್ದಾರಿಯನ್ನು ನಾವು ಹೊತ್ತುಕೊಂಡಿದ್ದೇವೆ ಎಂದರು.
ಒಕ್ಕೂಟದ ಸದಸ್ಯ ಸಂಜಯ್ ಸಿನ್ಹಾ ಮಾತನಾಡಿ, ಒಕ್ಕೂಟದಲ್ಲಿ ಅತಿ ಹಿರಿಯರು 63ವರ್ಷ ಪ್ರಾಯದ ಹಳೆಯ ವಿದ್ಯಾರ್ಥಿ ಇದ್ದು, ಅತಿ ಕಿರಿಯರೆಂದರೆ 20 ವರ್ಷದ ಆಜುಬಾಜಿನಲ್ಲಿರುವ ಸದಸ್ಯರಿದ್ದಾರೆ. ಅತ್ಯಂತ ಹೆಚ್ಚು ಅನುಭವಿ ಸದಸ್ಯರು ಮತ್ತು ಯುವಕರನ್ನು ಹೊಂದಿರುವ ಒಕ್ಕೂಟದ ಸದಸ್ಯರೆಲ್ಲಾ ಸೇರಿ ಸಮಾಜದ ಉನ್ನತಿಗಾಗಿ ಸೇವೆ ಸಲ್ಲಿಸಲಿದ್ದೇವೆ ಎಂದರು.







