ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರ ಕಣ್ತಪ್ಪಿಸಿ ರೌಡಿ ಪ್ರಶಾಂತ್ ಪರಾರಿ
ಬೆಂಗಳೂರು, ಜು.9: ಕೊಲೆ ಸೇರಿ ಮೂವತ್ತು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿ ಪ್ರಶಾಂತ್‌ನನ್ನು ಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸಿ ನಗರಕ್ಕೆ ಕರೆತರುವಾಗ ಮೂತ್ರ ವಿಸರ್ಜನೆ ನೆಪ ಮಾಡಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ನಗರದ ಮಾರತ್ ಹಳ್ಳಿ ಸಮೀಪದ ಮಾರುತಿನಗರದ ರೌಡಿ ಪ್ರಶಾಂತ್ ಯಾನೆ ರಾಜು(26) ವ್ಯಕ್ತಿಯೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ. ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎಚ್‌ಎಎಲ್ ಠಾಣಾ ಪೊಲೀಸರು, ಕೋಲಾರದಲ್ಲಿ ಅಡಗಿದ್ದ ಮಾಹಿತಿ ಆಧರಿಸಿ ಪೊಲೀಸ್ ಇನ್ಸ್‌ಪೆಕ್ಟರ್ ಸಾದಿಕ್‌ಪಾಶ ಅವರ ನೇತೃತ್ವದ ವಿಶೇಷ ತಂಡ ಬಂಧಿಸಿತ್ತು ಎನ್ನಲಾಗಿದೆ.
ಅಲ್ಲಿಂದ ಆತನನ್ನು ನಗರಕ್ಕೆ ಕರೆತಂದು ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.ಬಳಿಕ ರಾತ್ರಿ 8:30ರ ವೇಳೆ ಎಚ್‌ಎಎಲ್ ಪೊಲೀಸ್ ಠಾಣೆಗೆ ಕರೆತರುತ್ತಿದ್ದಾಗ ಕೆಆರ್ ಪುರಂನ ಐಟಿಐ ಗ್ರೌಂಡ್ ಬಳಿ ಮೂತ್ರ ವಿಸರ್ಜನೆಗೆ ಹೋಗುವ ನೆಪ ಮಾಡಿದ್ದಾನೆ. ಆತನನನ್ನು ಜೀಪಿನಿಂದ ಇಳಿಸಿ ಹಿಂದೆ ಇಬ್ಬರು ಪೇದೆಗಳನ್ನು ಕಳುಹಿಸಿದ್ದು ಅವರ ಕಣ್ತಪ್ಪಿಸಿ ಓಡಿದ್ದಾನೆ. ಬಳಿಕ ಮೂವರು ಬೆನ್ನಟ್ಟಿದರಾದರೂ ಕತ್ತಲಲ್ಲಿ ತಪ್ಪಿಸಿಕೊಂಡು ರಾತ್ರಿಯಿಡೀ ಶೋಧ ನಡೆಸಿದರಾದರೂ ಆತ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ನಡೆದ ಬಿಜೆಪಿ ಮುಖಂಡ ಈಶ್ವರಪ್ಪಅಪ್ತ ಸಹಾಯಕ ಅಪಹರಣ ಯತ್ನ ಪ್ರಕರಣದ ವಿಚಾರಣೆ ನಡೆಸಿದಾಗ ಆತ ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದ ಎನ್ನಲಾಗಿದ್ದು, ರೌಡಿ ಪ್ರಶಾಂತ್ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







