ಲಕ್ಷಾಂತರ ರೂ.ಮೊತ್ತದ ಚಿನ್ನಾಭರಣ ದರೋಡೆ
ಲಾಡ್ಜ್‌ನ ಕೊಠಡಿಯಿಂದಲೇ ಚಿನ್ನದಂಗಡಿಗೆ ಕನ್ನ..!
ಬೆಂಗಳೂರು, ಜು. 9: ಲಾಡ್ಜ್‌ಯೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡು ಕೆಳ ಮಹಡಿಯಲ್ಲಿದ್ದ ಚಿನ್ನದಂಗಡಿಯ ಗೋಡೆ ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕಾಟನ್‌ಪೇಟೆಯ ಮುಖ್ಯ ರಸ್ತೆಯಲ್ಲಿರುವ ಹಿಮ್ಮತ್ ಪ್ರಕಾಶ್ ಎಂಬುವರಿಗೆ ಸೇರಿದ ಕಾಂಚನ್ ಜ್ಯೂವೆಲರ್ಸ್‌ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಕಾಂಚನ್ ಜ್ಯೂವೆಲರ್ಸ್ ಅಂಗಡಿಯ ಮೇಲೆ ಪ್ಲಾಟಿನಂ ಹೆಸರಿನ ಲಾಡ್ಜ್ ಇದೆ.ಆದರೆ, ವ್ಯಕ್ತಿಯೊಬ್ಬ ಜೂ.19ರಂದು ಲಾಡ್ಜ್‌ನಲ್ಲಿ ಬಾಡಿಗೆಗೆ ಕೊಠಡಿಯನ್ನು ಪಡೆದುಕೊಂಡಿದ್ದ.ಅಲ್ಲಿಂದಲೇ, 1.5 ಅಡಿಯಷ್ಟು ಕೊರೆದು ಕೆಳಗಿದ್ದ ಚಿನ್ನದ ಅಂಗಡಿಗೆ ನುಗ್ಗಿ ಕಳವು ಮಾಡಿದ್ದಾನೆ ಎನ್ನಲಾಗಿದೆ.
ಶನಿವಾರ ಜ್ಯೂವೆಲರಿ ಅಂಗಡಿ ರಜೆ ಇತ್ತು. ಈ ಸಮಯವನ್ನೇ ಬಳಸಿಕೊಂಡು ಅಂಗಡಿಗೆ ಇಳಿದು ಸುಮಾರು ಮೂರು ಕೆ.ಜಿಯಷ್ಟ ಚಿನ್ನಾಭರಣ ಕಳವು ಮಾಡಲಾಗಿದೆ ಎನ್ನಲಾಗಿದೆ.ಇನ್ನೂ ಅಂಗಡಿಯಲ್ಲಿದ್ದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಲಾಡ್ಜ್‌ನಿಂದ ಶಬ್ದ ಬರುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದು, ಲಾಡ್ಜ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಕೊಠಡಿಯಲ್ಲಿದ್ದ ವ್ಯಕ್ತಿ ನಕಲಿ ಗುರುತಿನ ಚೀಟಿ ನೀಡಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







