ಇಬ್ಬರು ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತಿ
ಪರ ಪುರಷನೊಂದಿಗೆ ಪರಾರಿಯಾದ ಪತ್ನಿ

ಶಿವಮೊಗ್ಗ, ಜು. 9: ಪತ್ನಿಯು ಪರ ಪುರುಷನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದ ಪತಿಯೋರ್ವ ಪತ್ನಿ ಮನೆಯಲ್ಲಿಯೇ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ, ನಂತರ ತಾನು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ನಗರದ ರಾಗಿಗುಡ್ಡದ ಸೇವಾಲಾಲ್ ನಗರದಲ್ಲಿ ಶನಿವಾರ ಸಂಜೆ ವರದಿಯಾಗಿದೆ.
ಚಾಲಕ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಾಶೀಪುರ ರೈಲ್ವೆ ಗೇಟ್ ನಿವಾಸಿ ಶಿವಾನಾಯ್ಕೆ (35) ಆತ್ಮಹತ್ಯೆಗೆ ಶರಣಾದ ಪತಿ ಎಂದು ಗುರುತಿಸಲಾಗಿದೆ. ಯಶಸ್ವಿನಿ (5) ಹಾಗೂ ಭರತ್ (3) ತಂದೆಯಿಂದಲೇ ಕೊಲೆಗೀಡಾದ ಮಕ್ಕಳಾಗಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಶಿವಾನಾಯ್ಕೆ ಹಾಗೂ ಪತ್ನಿ ಪ್ರೇಮ ನಡುವೆ ಕೌಟಂಬಿಕ ಕಲಹವಿತ್ತು. ಈ ಹಿಂದೆ ಪ್ರೇಮ ಪತಿಯನ್ನು ತೊರೆದು ಹೋಗಿದ್ದು, ಆಕೆಯನ್ನು ಪತ್ತೆ ಹಚ್ಚಿ ಕರೆತರಲಾಗಿತ್ತು. ಪತಿಯ ಜೊತೆ ಜೀವನ ಸಾಗಿಸುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ಮತ್ತೆ ಪ್ರೇಮ ಪತಿಯನ್ನು ತೊರೆದು ಪರ ಪುರುಷನೊಂದಿಗೆ ಹೋಗಿದ್ದಳು. ಇದರಿಂದ ಶಿವಾನಾಯ್ಕೆ ತೀವ್ರ ಮನನೊಂದಿದ್ದರು ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಪತ್ನಿ ತೊರೆದು ಹೋಗಿದ್ದರಿಂದ ತನ್ನಿಬ್ಬರು ಮಕ್ಕಳನ್ನು ರಾಗಿಗುಡ್ಡದಲ್ಲಿರುವ ಪತ್ನಿಯ ಮನೆಯಲ್ಲಿಯೇ ಶಿವಾನಾಯ್ಕಿ ಬಿಟ್ಟಿದ್ದರು. ಶನಿವಾರ ಸಂಜೆ ಪತ್ನಿಯ ಮನೆಗೆ ಶಿವಾನಾಯ್ಕಿ ಆಗಮಿಸಿದ್ದಾನೆ. ಈ ವೇಳೆ ತನ್ನಿಬ್ಬರು ಮಕ್ಕಳನ್ನು ಕೊಠಡಿಯೊಂದರಲ್ಲಿ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ತದನಂತರ ತಾನು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.







