ಜೋಪಡಿಯ 29 ವಲಸೆ ಕಾರ್ಮಿಕರ ಕುಟುಂಬಗಳಿಗೆ ಬಡಾವಣೆ

ಉಡುಪಿ, ಜು.9: ಉಡುಪಿ ನಿಟ್ಟೂರಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಹಲವು ವರ್ಷಗಳಿಂದ ಜೋಪಡಿಗಳಲ್ಲಿ ವಾಸವಾಗಿದ್ದ ಸುಡುಗಾಡು ಸಿದ್ದರು ಮತ್ತು ಬುಡ್ಗ ಜಂಗಮ ಸಮುದಾಯದ 29 ವಲಸೆ ಕಾರ್ಮಿಕರ ಕುಟುಂಬಗಳಿಗೆ ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳೊಂದಿಗೆ ಕೊಡಂಕೂರು ಸಂಸ್ಕೃತ ವಿದ್ಯಾಪೀಠದ ಬಳಿ ನೂತನವಾಗಿ ನಿರ್ಮಿಸಿದ ಮನೆಗಳನ್ನು ಇಂದು ಹಸ್ತಾಂತರಿಸಲಾಯಿತು.
ಸರಕಾರಿ ವಸತಿ ಜಾಗದ ಕೊರತೆಯ ಕಾರಣ ಕೊಂಡಕೂರಿನಲ್ಲಿ ಸುಮಾರು 55 ಸೆಂಟ್ಸ್ ನಿವೇಶನವನ್ನು ಖರೀದಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಸತಿ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉಡುಪಿ ನಗರಸಭೆ ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಕಾರ ದೊಂದಿಗೆ ‘ಹೊಸಬೆಳಕು- ಹೊಸ ಬದುಕು’ ಪರಿಕಲ್ಪನೆಯಲ್ಲಿ 29 ಮನೆಗಳನ್ನು ನಿರ್ಮಿಸಿ, ಇದಕ್ಕೆ ‘ಪ್ರಮೋದ್ ಮಧ್ವರಾಜ್’ ಬಡಾವಣೆ ಎಂಬುದಾಗಿ ಹೆಸರಿಡಲಾಗಿದೆ.
ಈ ನೂತನ ಬಡಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು. ಎರಡು ಕೋಣೆ ಹಾಗೂ ಶೌಚಾ ಲಯ ಹೊಂದಿರುವ ಎಲ್ಲ ಮನೆಗಳಿಗೆ ಈಗಾಗಲೇ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಮುಂದೆ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 50ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕೃತ ರಸ್ತೆ, ಕಾಂಕ್ರೀಟ್ ಚರಂಡಿ, ದಾರಿದೀಪದ ವ್ಯವಸ್ಥೆ ಸಹಿತ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಗಳನ್ನು ಒದಗಿಸಲಾಗುವುದು ಎಂದರು. ಇಲ್ಲಿನ ನಿವಾಸಿಗಳು ಮಕ್ಕಳಿಗೆ ತಪ್ಪದೇ ಉತ್ತಮ ಶಿಕ್ಷಣ ನೀಡಬೇಕು. ಈ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದೆ ಸ್ವಚ್ಛತೆಯನ್ನು ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು. ರಸ್ತೆ ಅತಿಕ್ರಮಣ ಮಾಡಬಾರದು ಎಂದು ಸಚಿವರು ಸೂಚನೆ ನೀಡಿದರು. ಈ ಬಡಾವಣೆಯ ನಾಗರಿಕರಿಗೆ ಬಿಪಿಎಲ್ ಕಾರ್ಡ್ ನೀಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಈ ಬಡಾವಣೆಯ ಮಕ್ಕಳಿಗೆ ಶೀಘ್ರದಲ್ಲಿ ಅಂಗನವಾಡಿ ಸೌಲಭ್ಯವನ್ನು ಒದಗಿಸಲು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಜನಾಂಗದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡ ಬೇಕು ಎಂದು ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಕಕ್ಕುಂಜೆ, ಸದಸ್ಯರಾದ ಜಾನಕಿ ಗಣಪತಿ ಶೆಟ್ಟಿಗಾರ್, ನಾರಾಯಣ ಕುಂದರ್, ಯುವರಾಜ್, ಶಾಂತಾರಾಮ್ ಸಲ್ವಾಂಕರ್, ನಾಮ ನಿರ್ದೇಶಿತ ಸದಸ್ಯ ಜನಾದರ್ನ ಭಂಡಾರ್ಕರ್, ನಗರಸಭೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ಗಣೇಶ್, ಸಮುದಾಯ ಸಂಘಟನಾಧಿಕಾರಿ ನಾರಾ ಯಣ, ಬಡಾವಣೆ ನಿರ್ಮಿಸಿದ ಕಿನ್‌ಪ್ರಾಟೆಕ್ ಸಂಸ್ಥೆಯ ಕಾರ್ತಿಕ್ ಶೆಟ್ಟಿ ಅಲೆವೂರು, ಪ್ಲಷ್ ಲಿವಿಂಗ್‌ನ ಮುಹಮ್ಮದ್ ಸೈಪ್, ಸುಡುಗಾಡು ಸಿದ್ದರು ಮತು ಬುಡ್ಗ ಜಂಗಮ ಸಮುದಾಯದ ಮುಖಂಡರಾದ ರಾಮಯ್ಯ, ದುಗ್ಗಪ್ಪ, ಲಕ್ಷ್ಮಣ ಕರಿ, ಮರಿಸ್ವಾಮಿ ಗದಗ ಮೊದಲಾದವರು ಉಪಸ್ಥಿತರಿದ್ದರು.







