ದಲಿತರಿಗೆ ಸಾಮಾಜಿಕ ಬಹಿಷ್ಕಾರ ಇಂದಿಗೂ ಜೀವಂತ: ಮೋಟಮ್ಮ

ಬೆಂಗಳೂರು, ಜು.9: ಸಮಾಜದಲ್ಲಿ ಕೆಲವರ ಮನಸ್ಸು ಕಲುಷಿತ ಹಾಗೂ ವಿಷಪೂರಿತವಾಗಿದೆ. 21ನೆ ಶತಮಾನದಲ್ಲಿಯೂ ದಲಿತರು ಕ್ಷುಲ್ಲಕ ಕಾರಣಗಳಿಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವಂತಹ ಪರಿಸ್ಥಿತಿಯಿದೆ. ಎಲ್ಲರಂತೆ ನಾವು ಗೌರವದಿಂದ ಬಾಳಬೇಕಾದರೆ, ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಕರೆ ನೀಡಿದ್ದಾರೆ.
ರವಿವಾರ ಕೆ.ಆರ್.ಪುರದಲ್ಲಿ ಕರ್ನಾಟಕ ಛಲವಾದಿ ವೇದಿಕೆಯ ಕೇಂದ್ರ ಕಚೇರಿ ಹಾಗೂ ಒನಕೆ ಓಬವ್ವ ಮಹಿಳಾ ಅಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಛಲವಾದಿ ಸಮುದಾಯದ ಬಹುಪಾಲು ಮಂದಿಗೆ ಗಂಟೆ ಬಟ್ಟಲಿನ ಮಹತ್ವ ತಿಳಿದಿಲ್ಲ. ಸಮುದಾಯದ ಪ್ರತಿನಿಧಿಗಳು ಈ ಬಗ್ಗೆ ಜವಾಬ್ದಾರಿ ತೆಗೆದುಕೊಂಡು ಸಂಘಟನೆಗೆ ಆದ್ಯತೆ ನೀಡಬೇಕು. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಸಭೆಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮೋಟಮ್ಮ ಕರೆ ನೀಡಿದರು.
ಅಂಬೇಡ್ಕರ್ ಪ್ರತಿಪಾದಿಸಿದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ನಾವು ಮುಂದಾಗಬೇಕು. ಜನಪ್ರತಿನಿಧಿಗಳು ಸಮಾಜದಲ್ಲಿನ ಎಲ್ಲ ವರ್ಗಗಳನ್ನು ಜೊತೆಗೆ ಕೊಂಡೊಯ್ಯಬೇಕು. ಒಂದು ಸಮಾಜ ಮತ್ತೊಂದು ಸಮಾಜದ ಮೇಲೆ ಸವಾರಿ ಮಾಡುವ ಪ್ರಯತ್ನಕ್ಕೆ ಎಂದಿಗೂ ಬೆಂಬಲ ನೀಡಬಾರದು ಎಂದು ಮೊಟಮ್ಮ ಮನವಿ ಮಾಡಿದರು.
ನ್ಯಾಯ ಸಮ್ಮತವಾಗಿ ಹಿಂದುಳಿದ, ತುಳಿತಕ್ಕೊಳಗಾದವರ ಪರವಾಗಿ ಶಾಸಕರು ನಿಲ್ಲಬೇಕು. ಚುನಾವಣೆ ಸಂದರ್ಭದಲ್ಲಿ ನನಗೆ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿದ್ದರು. ನಾನು ಹೋಗಿ ಬಂದ ನಂತರ ಆ ದೇವಸ್ಥಾನವನ್ನು ಶುದ್ಧಿಕರಿಸಿದರು ಎಂಬ ವಿಷಯ ಕೇಳಿ ಮನಸ್ಸಿಗೆ ನೋವಾಯಿತು. ಅಂದಿನಿಂದ, ದೇವಸ್ಥಾನಗಳಿಗೆ ಯಾಕೆ ಹೋಗಬೇಕು ಎಂದನಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕ ಬಿ.ಎ.ಬಸವರಾಜ ಮಾತನಾಡಿ, ತುಳಿತಕ್ಕೊಳದ ಜನಾಂಗಗಳನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮೇಲೆ ತರುವ ಕೆಲಸವನ್ನು ನಾವು ಮಾಡಬೇಕಿದೆ. ತಾಲೂಕು ಕಚೇರಿ ಆವರಣದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲಾಗುತ್ತಿದೆ. ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ತಲಾ ಎರಡು ಹಾಸ್ಟೆಲ್‌ಗಳನ್ನು 7 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.
ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಕೆ.ಆರ್.ಪುರ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಹಾಗೂ ಶಾಲೆಯ ಶುಲ್ಕ ಪಾವತಿಸಲು ಆರ್ಥಿಕ ನೆರವನ್ನು ವೈಯಕ್ತಿಕವಾಗಿ ನೀಡುತ್ತಿರುವುದಾಗಿ ಬಸವರಾಜ ಹೇಳಿದರು.
ಯಾರೂ ಇಂತಹದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ಅನಿರೀಕ್ಷಿತವಾಗಿ ಯಾವುದೋ ಒಂದು ಜಾತಿಯಲ್ಲಿ ಹುಟ್ಟಿರುತ್ತೇವೆ. ಆದರೆ, ಎಲ್ಲ ವರ್ಗಗಳ ಜನರನ್ನು ಸಮಾನರಂತೆ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ಛಲವಾದಿ ಸಮುದಾಯದ ಇತಿಹಾಸವನ್ನು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು. ಸಮಾರಂಭದ ದಿವ್ಯಸಾನಿಧ್ಯವನ್ನು ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನದ ಶ್ರೀ ಬಸವನಾಗಿದೇವ ಸ್ವಾಮಿ ವಹಿಸಿದ್ದರು. ಛಲವಾದಿ ವೇದಿಕೆ ರಾಜ್ಯಾಧ್ಯಕ್ಷ ಛಲವಾದಿ ಎಂ.ವೆಂಕಟೇಶ್, ಒನಕೆ ಓಬವ್ವ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಎಸ್.ಜ್ಯೋತಿ ಛಲವಾದಿ, ಮುಖಂಡ ಎಲ್.ಮುನಿಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







