ಭಾರತೀಯ ಸೇನೆ ಪ್ರತಿದಾಳಿ ಇಬ್ಬರು ಪಾಕ್ ಯೋಧರ ಸಾವು

ಶ್ರೀನಗರ, ಜು. 9: ಕದನ ವಿರಾಮವನ್ನು ನಿರಂತರ ಉಲ್ಲಂಘಿಸುತ್ತಿರುವ ಪಾಕಿಸ್ಥಾನದ ವಿರುದ್ಧ ರವಿವಾರ ಪ್ರತಿ ದಾಳಿ ಆರಂಭಿಸಿರುವ ಭಾರತೀಯ ಸೇನೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಠಾಣೆಗಳ ಮೇಲೆ ದಾಳಿ ನಡೆಸಿದೆ. ಪರಿಣಾಮ ಪಾಕಿಸ್ತಾನದ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಯೋಧರು ಗಾಯಗೊಂಡಿದ್ದಾರೆ.
ಈ ಪ್ರತಿದಾಳಿಯಲ್ಲಿ ನಾಲ್ಕು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 17 ಮಂದಿ ಗಾಯಗೊಂಡಿದ್ದಾರೆ. ಗಡಿರೇಖೆಯಲ್ಲಿರುವ ಪಾಕಿಸ್ತಾನದ ಘಟಕಗಳನ್ನು ನಾಶಗೊಳಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಿಜಿರಾ ವಲಯದ ಗಡಿ ಗ್ರಾಮಗಲ್ಲಿ ನಾಗರಿಕರು ಮೃತಪಟ್ಟ ಹಾಗೂ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಪೂಂಛ್ ವಲಯದ ಗಡಿ ನಿಯಂತ್ರಣ ರೇಖೆಗುಂಟ ನಾಗರಿಕ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಪಾಕಿಸ್ತಾನ ಸೇನೆ ಮೋರ್ಟರ್ ಹಾಗೂ ಇತರ ಶಸ್ತ್ರಾಸ್ತಗಳಿಂದ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಯೋಧ, ಆತನ ಪತ್ನಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಇಂದು ಪ್ರತಿದಾಳಿ ನಡೆಸಿತು.
ಪಾಕಿಸ್ತಾನ ಪಡೆ ಕಾರ್ಯಾಚರಣೆ ಅಪ್ರಚೋದಿತ ಹಾಗೂ ವಿವೇಚನಾರಹಿತ ಎಂದು ಹೇಳಿರುವ ಭಾರತದ ಸೇನೆ, ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿತ್ತು.







