ಟಿಪ್ಪುಸುಲ್ತಾನ್‌ನ ಕನಸುಗಳು ನಾಟಕ ಪ್ರದರ್ಶನ

ಬೆಂಗಳೂರು, ಜು.8: ಟಿಪ್ಪುಸುಲ್ತಾನ್ ಕೆ ಖ್ವಾಬ್(ಟಿಪ್ಪುಸುಲ್ತಾನ್‌ನ ಕನಸುಗಳು) ನಾಟಕ ಪ್ರದರ್ಶನವನ್ನು ಜು.13 ಹಾಗೂ 14ರಂದು ಸಂಜೆ 6 ಗಂಟೆಯಿಂದ ರಾತ್ರಿ 8.30ರವರೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದು ನಾಟಕದ ನಿರ್ದೇಶಕ ಝಫರ್ ಮೊಹಿಯುದ್ದೀನ್ ತಿಳಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರ ‘ಡ್ರೀಮ್ಸ್ ಆಫ್ ಸುಲ್ತಾನ್’ ಕೃತಿಯನ್ನು ಉರ್ದು ಹಾಗೂ ಹಿಂದಿ ಭಾಷೆಗೆ ತಾನು ಭಾಷಾಂತರಗೊಳಿಸಿದ್ದು, ಇದೇ ಮೊದಲ ಬಾರಿಗೆ ದಖನಿ ಉರ್ದು ಭಾಷೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಗಿರೀಶ್ ಕಾರ್ನಾಡ್ ಅವರ ಕೃತಿ 1997ರಲ್ಲಿ ಪ್ರಕಟಗೊಂಡಿತ್ತು. ಈಗಾಗಲೆ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕೃತಿಯನ್ನು ಆಧರಿಸಿ ನಾಟಕಗಳು ಪ್ರದರ್ಶಿಸಲ್ಪಟ್ಟಿವೆ. ಕಟ್‌ಪುತ್ಲಿಯಾ ಥಿಯೇಟರ್ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದು ಅವರು ಹೇಳಿದರು.
ಐತಿಹಾಸಿಕವಾದ ಘಟನಾವಳಿಗಳಿಗೆ ದೃಶ್ಯರೂಪ ಕೊಡುವುದು ಸಾಮಾನ್ಯ ಸಂಗತಿಯಲ್ಲ. ಇದೊಂದು ದೊಡ್ಡ ಸವಾಲು, ಪಾತ್ರಗಳ ಪೋಷಣೆ, ಅವರ ಬಟ್ಟೆಗಳ ವಿನ್ಯಾಸ, ಭಾಷೆಯ ಬಳಕೆ ಎಲ್ಲದರ ಬಗ್ಗೆಯೂ ಸೂಕ್ಷ್ಮವಾಗಿ ಗಮನ ಹರಿಸಬೇಕಿದೆ ಎಂದು ಝಫರ್ ಮೊಹಿಯುದ್ದೀನ್ ತಿಳಿಸಿದರು.
ಜು.13ರಂದು ರಾಜ್ಯ ಉರ್ದು ಅಕಾಡೆಮಿ ಹಾಗೂ ಜು.14ರಂದು ದಾನಿಗಳ ಸಹಕಾರದೊಂದಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಮೊದಲನೆ ದಿನ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಚಿವ ರೋಷನ್‌ಬೇಗ್ ಪಾಲ್ಗೊಳ್ಳಲಿದ್ದು, ಸಚಿವ ತನ್ವೀರ್‌ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.







