ಯಕ್ಷಗಾನ ಕೇಂದ್ರದ ಕಲಾವಿದರ ಹೋರಾಟಕ್ಕೆ ಜಯ
ಉಡುಪಿ, ಜು.9: ಉಡುಪಿ ಯಕ್ಷಗಾನ ಕೇಂದ್ರದ ಕೀಳು ರಾಜಕೀಯ, ತಾರತಮ್ಯ ನೀತಿಯನ್ನು ವಿರೋಧಿಸಿ ರಾಜೀನಾಮೆ ನೀಡಿದ್ದ ಕೇಂದ್ರದ 10 ಮಂದಿ ಕಲಾವಿದರಿಗೆ ನೂತನ ಆಡಳಿತ ಮಂಡಳಿಯು ಸೌಹಾರ್ದಯುತವಾಗಿ ಗ್ರಾಚ್ಯುವಿಟಿಯನ್ನು ಕೊಡ ಮಾಡಿದೆ.
ಕೋಟ ಶಿವರಾಮ ಕಾರಂತರ ಮಾರ್ಗದರ್ಶದಲ್ಲಿ ಆರಂಭವಾದ ಕೇಂದ್ರದಲ್ಲಿ ಕಳೆದ 30ವರ್ಷಗಳಿಂದ ಕಲಾವಿದರಾಗಿ ಕಲಾ ಸೇವೆ ನೀಡಿ ಕೇಂದ್ರದ ಬೆಳವಣಿಗೆ ಗಾಗಿ ದುಡಿದ ಕಲಾವಿದರುಗಳಾದ ಕೃಷ್ಣಮೂರ್ತಿ ಉರಾಳ, ಪ್ರತೀಶ್ ಕುಮಾರ್, ದೇವದಾಸ ರಾವ್, ಸತೀಶ್ ಕೆದಿಲಾಯ, ಗಣೇಶ ನಾಯ್ಕ, ಮುಗ್ವ, ಉಮೇಶ ಪೂಜಾರಿ, ಪ್ರಸಾದ್ ಕುಮಾರ್, ಮಿಥುನ್ ನಾಯಕ, ಮಂಜುನಾಥ ಕುಲಾಲ, ಕಾರ್ತಿಕ್ ಎಸ್.ಕರ್ಗಲ್ಲು ಕೇಂದ್ರದ ಕೀಳು ರಾಜಕೀಯ, ತಾರತಮ್ಯ ನೀತಿಯಿಂದ ಬೇಸತ್ತು ಪ್ರತಿಭಟಿಸಿ 2015ರ ಎಪ್ರಿಲ್‌ನಲ್ಲಿ ತಮ್ಮ ವೃತ್ತಿಗೆ ಸಾಮೂಹಿಕ ರಾಜೀನಾಮೆ ನೀಡಿ ಹೊರನಡೆದಿದ್ದರು. ಆದರೂ ಆಡಳಿತ ಮಂಡಳಿಯು ಕಲಾವಿದರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಮತ್ತು ಗ್ರಾಚ್ಯುವಿಟಿಯನ್ನು ನೀಡಿರಲಿಲ್ಲ. ಇಂತಹ ಸಂದರ್ಭ ದಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆಯ ನೆರವಿನೊಂದಿಗೆ ಉಡುಪಿ ಕಾರ್ಮಿಕ ಅಧಿಕಾರಿಯವರ ಮುಂದೆ ಗ್ರಾಚ್ಯುವಿಟಿಗಾಗಿ ದಾವೆ ಹೂಡಲಾಯಿತು.
ಕಲಾವಿದರು ಕೆಲಸ ಮಾಡಿದಕ್ಕೆ ಹಲವಾರು ದಾಖಲೆಗಳನ್ನು ಸಲ್ಲಿಸಿದ್ದರೂ ಯಕ್ಷಗಾನ ಕೇಂದ್ರವು ಗ್ರಾಚ್ಯುವಿಟಿ ನೀಡಲು ನಿರಾಕರಿಸಿತು. ಇತ್ತೀಚೆಗೆ ಕೇಂದ್ರದ ಆಡಳಿತವು ಮಾಹೆಗೆ ಬದಲಾದ ನಂತರದಲ್ಲಿ ಸಿಐಟಿಯು ಮತ್ತು ಕಲಾವಿದರ ನ್ಯಾಯಯುತವಾದ ಹೋರಾಟಕ್ಕೆ ಸ್ಪಂದಿಸಿದ ನೂತನ ಆಡಳಿತ ಮಂಡಳಿಯು ಸೌಹಾರ್ದಯುತವಾಗಿ ಗ್ರಾಚ್ಯುವಿಟಿಯನ್ನು ಕೊಡ ಮಾಡಿದ್ದಾರೆ. ಕಲಾವಿದರಿಗೆ ನ್ಯಾಯ ಒದಗಿಸಿದ ಯಕ್ಷಗಾನ ಕೇಂದ್ರದ ನೂತನ ಆಡಳಿತ ಮಂಡಳಿಗೆ ಹಾಗೂ ಮಾಹೆಗೆ ಮತ್ತು ನ್ಯಾಯಯುತವಾಗಿ ಸಿಗಬೇಕಾಗಿದ್ದ ಗ್ರಾಚ್ಯುವಿಟಿಯನ್ನು ಪಡೆಯಲು ಕಾರ್ಮಿಕ ನ್ಯಾಯಾಯಲಯದಲ್ಲಿ ದಾವೆ ಹೂಡಲು ಮುತುವರ್ಜಿ ವಹಿಸಿದ ಸಿಐಟಿಯು ಮುಖಂಡರಿಗೆ ಎಲ್ಲಾ 10 ಮಂದಿ ಕಲಾವಿದರ ಪರವಾಗಿ ಕೃಷ್ಣಮೂರ್ತಿ ಉರಾಳ ಮತ್ತು ಪ್ರತೀಶ್ ಕುಮಾರ ಕೃತಜ್ಞತೆ ಸಲ್ಲಿಸಿದ್ದಾರೆ.







