ಪೆಟ್ರೋಲ್ ಕೇಳುವ ನೆಪದಲ್ಲಿ ವಿದ್ಯಾರ್ಥಿಗೆ ಇರಿದ ಪ್ರಕರಣ: ಮೂವರ ಬಂಧನ

ಮಂಗಳೂರು, ಜು. 9: ನಗರದ ಕಾಲೇಜೊಂದರ ವಿದ್ಯಾರ್ಥಿ ಕೇರಳದ ಮಣಪ್ಪುರಂ ನಿವಾಸಿ ಮುಹಮ್ಮದ್ ಸಾಜಿದ್‌ನ ಮೇಲೆ ಅಡ್ಯಾರ್‌ಪದವು ಎಂಬಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಫರಂಗಿಪೇಟೆಯ ಅರ್ಕುಳ ಕಂಪಾ ನಿವಾಸಿ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿರುವ ನಿತಿನ್ ಪೂಜಾರಿ (21), ಅಡ್ಯಾರ್‌ಕಟ್ಟೆಯ ಕೆಂಜೂರು ನಿವಾಸಿ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿರುವ ಪ್ರಾಣೇಶ್ ಪೂಜಾರಿ (20) ಮತ್ತು ಪಡೀಲ್‌ನ ಅಳಪೆ ಕಂಡೇವು ನಿವಾಸಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಕಿಶನ್ ಪೂಜಾರಿ (21) ಬಂಧಿತ ಆರೋಪಿಗಳು.
ಜು.7ರಂದು ಸಂಜೆ ಸಾಜಿದ್ ಅವರು ತನ್ನ ಸೇಹಿತ ನೌಫಲ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಅಡ್ಯಾರ್‌ಪದವಿನಿಂಗ ಬಿತ್ತುಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಡ್ಯಾರ್‌ಪದವಿನಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ವಾಹನ ಸ್ಟಾರ್ಟ್ ಆಗುವುದಿಲ್ಲವೆಂದು ಹೇಳಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಸಾಜಿದ್ ಮತ್ತು ನೌಫಲ್ ವಾಹನದಿಂದ ಕೆಳಗಿಳಿದಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ದೂರಲಾಗಿತ್ತು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಲ್ಲೆಗೊಳಗಾದ ಸಾಜಿದ್‌ನ ಹೊಟ್ಟೆಯ ಬಲ ಭಾಗ ಹಾಗೂ ಕೈಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಂಧಿತ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಕೆ.ಎಂ. ಶಾಂತರಾಜು ಹಾಗೂ ಹನುಮಂತರಾಯ ಮತ್ತು ಸಿಸಿಆರ್ ಬಿ ಎಸಿಪಿ ವೆಲೆಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







