ಧರ್ಮಸ್ಥಳ: ಯಾತ್ರಾರ್ಥಿ ನೀರು ಪಾಲು

ಬೆಳ್ತಂಗಡಿ, ಜು. 9: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಬೆಂಗಳೂರು ಮೂಲದ ಯುವಕ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ರವಿವಾರ ನಡೆದಿದೆ.
ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಹರೀಶ್ (23) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.
ಈತ ಬೆಂಗಳೂರಿನಿಂದ ತನ್ನ ಸ್ನೆಹಿತರ ಜತೆ ಹೊರನಾಡು, ಶೃಂಗೇರಿ ಕ್ಷೇತ್ರಗಳನ್ನು ಸಂದರ್ಶಿಸಿ ಧರ್ಮಸ್ಥಳಕ್ಕೆ ಬಂದಿದ್ದರು. ರವಿವಾರ ಬೆಳಗ್ಗೆ ನೇತ್ರಾವತಿಯ ಹಳೆ ಸೇತುವೆ ಬಳಿ ಸ್ನಾನಕ್ಕೆ ತೆರಳಿದ್ದ ವೇಳೆ ನೀರಿಗೆ ಬಿದ್ದಿದ್ಧಾರೆ ಎನ್ನಲಾಗಿದೆ. ನೀರಿನ ಹರಿವಿಗೆ ಈತ ಕೊಚ್ಚಿಕೊಂಡು ಹೋಗಿದ್ದು, ಸ್ಥಳೀಯರು, ನುರಿತ ಈಜುಗಾರರ ತಂಡ ಹುಡುಕಾಟ ನಡೆಸಿದರು ಈತನ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದವರು ಹುಡುಕಾಟ ನಡೆಸುತ್ತಿದ್ದಾರೆ.
ಯಾತ್ರಾರ್ಥಿಗಳಿಗೆ ನೀರಿಗಿಳಿಯದಂತೆ ನೇತ್ರಾವತಿ ಸ್ನಾನಘಟ್ಟದಲ್ಲಿ ಅಪಾಯ ಇರುವ ಕಡೆಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಧ್ವನಿವರ್ಧಕದ ಮೂಲಕವೂ ನೀರಿಗೆ ಇಳಿಯದಂತೆ ಸೂಚನೆ ನೀಡಲಾಗುತ್ತಿದೆ. ಹರೀಶ ಹಾಗೂ ಈತನ ಸ್ನೇಹಿತರು ಸ್ನಾನಘಟ್ಟದ ಬಳಿ ಸ್ನಾನಕ್ಕೆ ತೆರಳದೆ ನೇತ್ರಾವತಿ ಹಳೇ ಸೇತುವೆ ಬಳಿ ಸ್ನಾನಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





