ಕಾಲಮಿತಿಯೊಳಗೆ ಗಂಗಾ ನದಿ ಶುದ್ಧೀಕರಣ: ಸಚಿವೆ ಉಮಾ ಭಾರತಿ

ಉಡುಪಿ, ಜು.9: ಒಟ್ಟು 10 ವರ್ಷಗಳ ಗಂಗಾ ಶುದ್ಧೀಕರಣ ಯೋಜನೆಯನ್ನು ಕಾಲಮಿತಿಯೊಳಗೆ ಕಾರ್ಯಗತಗೊಳಿಸಲಾಗುವುದು ಎಂದು ಕೇಂದ್ರ ಜಲ ಸಂಪನ್ಮೂಲ, ಗಂಗಾ ಶುದ್ಧೀಕರಣ ಯೋಜನಾ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
ಜರ್ಮನಿ ದೇಶದ ರಾಯ್ನ ಮತ್ತು ಲಂಡನ್‌ನ ತೇಮ್ಸ್ ನದಿ ಮಾಲಿನ್ಯಗೊಂಡಿದ್ದು, ಅವರಲ್ಲಿ ಹಣ ಹಾಗೂ ತಂತ್ರಜ್ಞಾನವಿದ್ದರೂ ಅದರ ಶುದ್ದೀಕರಣ ಇನ್ನೂ ಸಾಧ್ಯವಾಗಲಿಲ್ಲ. ಅದೇ ರೀತಿ ಗಂಗಾ ನದಿಯ ಶುದ್ಧೀಕರಣವೂ ಬಹಳ ಕಷ್ಟಕರವಾಗಿದ್ದು, ಅದರ ಹೊಣೆಗಾರಿಕೆ ನನ್ನ ಮೇಲಿದೆ ಎಂದು ಸಚಿವೆ ಉಮಾ ಭಾರತಿ ಹೇಳಿದರು.
ಕೊಲ್ಕತ್ತ, ಅಲಹಾಬಾದ್‌ನಂತಹ ದೊಡ್ಡ ನಗರಗಳಲ್ಲಿ, ಹೃಷಿಕೇಶ, ಫಾರೂಖಾಬಾದ್, ಕಾನ್ಪುರ, ಪಟ್ನಾಗಳಲ್ಲಿರುವ 7,064 ಕೈಗಾರಿಕೆಗಳ ಮಾಲಿನ್ಯ ಗಂಗಾ ನದಿಗೆ ವಿಸರ್ಜನೆಯಾಗುತ್ತಿವೆ. ಸುಮಾರು 6,000 ಗ್ರಾಪಂ ವ್ಯಾಪ್ತಿಯ ತ್ಯಾಜ್ಯ ನೀರು ಇದೇ ನದಿಗೆ ಹರಿಯುತ್ತಿದೆ. ಈ ನದಿಯ ಶುದ್ದೀಕರಣ ಮಾಡುವ ಯೋಜನೆಯನ್ನು ತ್ವರಿತಗತಿ ಮತ್ತು ಕಾಲಮಿತಿಯಲ್ಲಿ ಜಾರಿಗೊಳಿ ಸಲು ಕ್ರಿಯಾ ಪಡೆಯನ್ನು ರಚಿಸಲಾಗಿದೆ ಎಂದರು.
ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಗೀರಥ ಗಂಗೆಯನ್ನು ಭೂಮಿಗೆ ಹರಿಸಲು ಎಷ್ಟು ಕಷ್ಟಪಟ್ಟರೋ ಅಷ್ಟೆ ಕಷ್ಟ ವನ್ನು ಅದರ ಶುದ್ಧೀಕರಿಸಲು ಪಡಬೇಕಾಗಿದೆ. ಈ ಶುದ್ದೀಕರಣ ಮಾಡುವ ಸೇವೆಗೆ ಉಮಾಭಾರತಿ ಮುಂದಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಸತ್ಯ ಮೂರ್ತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.