ಬುದ್ಧಿಯು ನಮ್ಮ ಕರ್ಮಾನುಸಾರ ಕೆಲಸ ಮಾಡುತ್ತದೆ: ಕನ್ಯಾಡಿ ಶ್ರೀ

ಬೆಳ್ತಂಗಡಿ, ಜು. 9: ಬುದ್ಧಿಯು ನಮ್ಮ ಕರ್ಮಾನುಸಾರ ಕೆಲಸ ಮಾಡುತ್ತದೆ. ಹೃದಯವೆಂಬ ಹಿಮಾಲಯದ ಗುಹೆಯಲ್ಲಿ ನಿತ್ಯ ಶುದ್ಧನಾದರೆ ಗುರು ತತ್ವದ ಬೆಳಕಾಗುತ್ತದೆ ಎಂದು ಕನ್ಯಾಡಿ ಶ್ರೀ ಗುರುದೇವ ಪೀಠಾಪತಿ, ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ರವಿವಾರ ವ್ಯಾಸಪೂರ್ಣಿಮೆ ನಿಮಿತ್ತ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧರ್ಮವನ್ನು ತಿಳಿಯಪಡಿಸುವುದೇ ಗುರುತತ್ವ. ಜೀವನದಲ್ಲಿ ಉತ್ಕರ್ಷ ಕಾಣಬೇಕಾದರೆ ಭಗವಂತನ ಆಶೀರ್ವಾದ, ಗುರುತತ್ವದ ಅಧ್ಯಯನದಿಂದ ಮಾತ್ರ ಸಾಧ್ಯ. ಇದು ಪರಮಾತ್ಮನ ಒಂದು ರೂಪ. ಮಕ್ಕಳು ಸಂಸ್ಕಾರವಿಲ್ಲದ ಶಿಕ್ಷಣ ಪಡೆದರೆ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ವ್ಯಕ್ತಿತ್ವಕ್ಕೆ ರೂಪಕೊಡುವ, ಅದನ್ನು ವಿಕಸಿಸುವಂತೆ, ಅರಳಿಸುವಂತೆ ಮಾಡುವುವನೇ ಗುರು ಎಂದ ಅವರು, ಕಾಮಿನಿ, ಕಾಂಚಾಣ ಹಾಗೂ ಕೀರ್ತಿಗೆ ಒಳಗಾಗದೆ ಧರ್ಮವನ್ನು ಪಾಲಿಸಬೇಕು. ಸ್ವಧರ್ಮವೇ ಶ್ರೇಷ್ಠವಾದದ್ದು. ಆದರೆ ಇನ್ನೊಂದು ಧರ್ಮವನ್ನು ದ್ವೇಷಿಸದೇ ಸಹಿಷ್ಣುತೆಯಿಂದ ನೋಡಬೇಕು. ಇನ್ನೊಬ್ಬರಿಗೆ ತೊಂದರೆ ಕೊಡದೆ ಬದುಕುವುದನ್ನೇ ಕಲಿಸುವುದು ಗುರುತತ್ವ. ಆತ್ಮದರ್ಶನ ಮಾಡಿದವ ಸ್ವಾಮೀತ್ವವನ್ನು ಹೊಂದುತ್ತಾನೆ ಎಂದರು.
ಕಾರ್ಯಕ್ರಮ ಮೊದಲು ಸತ್ಯನಾರಾಯಣ ಪೂಜೆ, ಹರಿಕಥಾ ಸತ್ಸಂಗ, ಗುರುಪೂಜೆ, ಸ್ವಾಮೀಜಿಯವರ ಪಾದಪೂಜೆ, ಬೆಳ್ಳಿ ಕೀರಟ ಧಾರಣೆ ನೆರವೇರಿತು. ವೇಮೂ ಲಕ್ಷ್ಮೀಪತಿ ಗೋಪಾಲಾಚಾರ್ಯ ಪೌರೋಹಿತ್ಯದ ವಿಧಾನಗಳನ್ನು ನೆರವೇರಿಸಿದರು. ವಿದ್ಯಾರ್ಥಿಗಳು ಲಿಂಗಾಷ್ಠಕ ಪಠಿಸಿದರು.
ಶ್ರೀ ಗುರುದೇವ ಟ್ರಸ್ಟ್‌ನ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ಮೋಹನ ಉಜ್ಜೋಡಿ, ಶ್ರಿ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜೀತಾ ವಿ. ಬಂಗೇರ, ಕನ್ಯಾಡಿ ಸೇವಾಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ, ಭಟ್ಕಳದ ಜೆ. ಎನ್. ನಾಯ್ಕ, ಧಾರ್ಮಿಕ ದತ್ತಿ ಪರಿಷತ್ ಸದಸ್ಯ ಮುಕುಂದ ಸುವರ್ಣ, ರೋಹಿತಾಕ್ಷ ಮಂಗಳೂರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಶ್ರೀಗುರುದೇವ ಟ್ರಸ್ಟ್‌ನ ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿದರು. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಹರಿಕಥಾ ಸತ್ಸಂಗ: ವ್ಯಾಸಪೂರ್ಣಿಮೆ ನಿಮಿತ್ತ ರವಿವಾರ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಹರಿಕಥಾ ಸತ್ಸಂಗ ನಡೆಯಿತು.
ಕಾಸರಗೋಡಿನ ಶ್ರದ್ಧಾ ಹರಿಕಥಾ ಸತ್ಸಂಗವನ್ನು ನಡೆಸಿಕೊಟ್ಟರು. ತಬಲದಲ್ಲಿ ಗೌರಿಶಂಕರ ಗುರುವಾಯನಕೆರೆ, ಹಾರ್ಮೋನಿಯಂನಲ್ಲಿ ಕಮಲಾಕ್ಷ ಧರ್ಮಸ್ಥಳ ಸಹಕರಿಸಿದರು.







