ಕದನವಿರಾಮ ಉಲ್ಲಂಘನೆ ಆರೋಪ: ಪಾಕ್‌ನಿಂದ ಭಾರತಕ್ಕೆ ಸಮನ್ಸ್

ಇಸ್ಲಾಮಾಬಾದ್,ಜು.9: ಗಡಿನಿಯಂತ್ರಣ ರೇಖೆಯುದ್ದಕ್ಕೂ ಭಾರತವು ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆಯೆಂದು ಆರೋಪಿಸಿ, ಹೊಸದಿಲ್ಲಿಯಲ್ಲಿನ ಪಾಕ್ ಹೈಕಮೀಶನರ್ ಸತತ ಎರಡನೆ ದಿನವೂ ರವಿವಾ ಭಾರತೀಯ ಉಪಹೈಕಮೀಶನರ್ ಅವರನ್ನು ಕರೆಯಿಸಿಕೊಂಡು ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ.
ಭಾರತದ ಅಪ್ರಚೋದಿತ ಕದನವಿರಾಮ ಉಲ್ಲಂಘನೆಗಳಿಂದಾಗಿ ಗಡಿರೇಖೆಯಲ್ಲಿ ಹೆಚ್ಚುತ್ತಿರುವ ನಾಗರಿಕ ಸಾವುನೋವಿನ ಪ್ರಕರಣಗಳನ್ನು ಖಂಡಿಸಲು ಹಾಗೂ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಇಸ್ಲಾಮಬಾದ್‌ನಲ್ಲಿನ ಉಪಹೈಕಮಿಶನರ್ ಜೆ.ಪಿ.ಸಿಂಗ್ ಅವರನ್ನು ಇಂದು ಕರೆಸಿಕೊಳ್ಳಲಾಯಿತು ಎಂದು ಪಾಕಿಸ್ತಾನ ವಿದೇಶಾಂಗ ಕಾರ್ಯಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಚಿರಿಕೋಟ್ ಹಾಗೂ ಸತ್ವಾಲ್ ಸೆಕ್ಟರ್‌ನಲ್ಲಿ ಶನಿವಾರ ಭಾರತೀಯ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇನ್ನೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಇದರೊಂದಿಗೆ ಭಾರತೀಯ ಸೇನೆಯ ಅಪ್ರಚೋದಿತ ದಾಳಿಗೆ ಕಳೆದ ಎರಡು ದಿನಗಳಲ್ಲಿ ಸಾವನ್ನಪ್ಪಿದ ಪಾಕ್ ನಾಗರಿಕರ ಸಂಖ್ಯೆ 5ಕ್ಕೇರಿದೆ. ಇವರಲ್ಲಿ ನಾಲ್ವರು ಮಹಿಳೆಯರೆಂದು ಪಾಕ್ ವಿದೇಶಾಂಗ ಇಲಾಖೆ ಆಪಾದಿಸಿದೆ.
ದಕ್ಷಿಣ ಏಶ್ಯ ಹಾಗೂ ಸಾರ್ಕ್ ವ್ಯವಹಾರಗಳ ಮಹಾನಿರ್ದೇಶಕ ಮುಹಮ್ಮದ್ ಫೈಸಲ್ ಅವರು ಇಂದು ಉಪಹೈಕಮೀಶನರ್ ಸಿಂಗ್ ಅವರನ್ನು ಕರೆಸಿಕೊಂಡು, ಭಾರತೀಯ ಸೇನೆಯು ಪಾಕ್ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ಮಾನವ ಘನತೆ ಹಾಗೂ ಅಂತಾರಾಷ್ಟ್ರೀಯ ಮಾನವಹಕ್ಕುಗಳು ಹಾಗೂ ಮಾನವೀಯ ಕಾನೂನುಗಳಿಗೆ ವ್ಯತಿರಿಕ್ತವಾಗಿದೆ ಎಂದು ಫೈಸಲ್ ಆರೋಪಿಸಿದ್ದಾರೆ.







