ಸಂಕಷ್ಟದಲ್ಲಿರುವ ಹಿಂದೂ, ಕ್ರೈಸ್ತ ಕುಟುಂಬಗಳಿಗೆ ಹೆಗಲಾದ "ಹಿದಾಯ ಫೌಂಡೇಶನ್"
ಕೋಮುದಳ್ಳುರಿಗೆ ಬಲಿಯಾದ ಜಿಲ್ಲೆಯಲ್ಲಿ ಮಾನವೀಯತೆಯ ದರ್ಶನ

ಮಂಗಳೂರು, ಜು.9: ದ.ಕ. ಜಿಲ್ಲೆ ಕೋಮುಜ್ವಾಲೆಯಲ್ಲಿ ಬೇಯುತ್ತಿದೆ. ಇರಿತ, ಕೊಲೆ, ಕಲ್ಲು ತೂರಾಟ, ಹಲ್ಲೆ ನಿರಂತರವಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ. ಇವೆಲ್ಲದರ ಮಧ್ಯೆ ಸಂಕಷ್ಟದಲ್ಲಿರುವ ಅನ್ಯಧರ್ಮೀಯ ಕುಟುಂಬಗಳಿಗೆ ನೆರವಾಗುವ ಮೂಲಕ ಮಂಗಳೂರಿನ ಹಿದಾಯ ಫೌಂಡೇಶನ್ ಕೋಮು ಸಾಮರಸ್ಯವನ್ನು ಸಾರಿದೆ.
ಘಟನೆ 1: ಮಂಗಳೂರು ಸರಿಪಳ್ಳ ರಸ್ತೆಯ ಅಳಪೆ ನಿವಾಸಿ 55ರ ಹರೆಯದ ಭವಾನಿ ಶೆಟ್ಟಿ ಅನಾರೋಗ್ಯ ಪೀಡಿತರು. ಮನೆಯಲ್ಲಿ ಒಂಟಿ ಜೀವನ. ಗಂಡ ಹಾಗೂ ಇದ್ದ ಒಬ್ಬ ಮಗ ಮೃತಪಟ್ಟಿದ್ದಾರೆ. ಇರುವ ಜೋಪಡಿಯಲ್ಲಿ ಶೌಚಾಲಯವಿಲ್ಲ. ವಿದ್ಯುತ್ ಇಲ್ಲ. ಆ ಮನೆಗೆ ಭೇಟಿ ನೀಡಿದ ತಂಡ ಶೌಚಾಲಯ ನಿರ್ಮಾಣದ ಭರವಸೆ ನೀಡಿದೆ.
ಘಟನೆ 2: ವಾಮಂಜೂರು ದಿವ್ಯಜ್ಯೋತಿ ಶಾಲೆಯ ಹಿಂಬದಿ ವಾಸವಾಗಿರುವ ಕೊರಗ ಜನಾಂಗದ 44ರ ಹರೆಯದ ಅವಿವಾಹಿತರಾದ ಐತಪ್ಪ ಕಳೆದ 7 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ನಿಲ್ಲಲು ಕೂರಲು ಆಗದ ಅವರನ್ನು ಓರ್ವ ಕುಟುಂಬ ಸದಸ್ಯರು ನೋಡಿಕೊಳ್ಳುತ್ತಿದ್ದಾರೆ. ಭೇಟಿ ನೀಡಿದ ಹಿದಾಯ ಫೌಂಡೇಶನ್ ತಂಡದ ಸದಸ್ಯರು ಐತಪ್ಪರಿಗೆ ನಿರಂತರ ಔಷಧಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಘಟನೆ 3: ಇರುವೈಲ್ ನ ಕೆತ್ತಿಕಲ್ ನಿವಾಸಿ ಮೋಹಿನಿ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಮೂವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೀವನದ ಬಗ್ಗೆ ಭರವಸೆ ಇಲ್ಲದೆ ಬದುಕು ಸವೆಸುತ್ತಿದ್ದಾರೆ. ಭೇಟಿಯಿತ್ತ ತಂಡ ಒಂದು ವರ್ಷದ ಮಟ್ಟಿಗೆ ಪ್ರತಿ ತಿಂಗಳು ಆಹಾರ ಸಾಮಗ್ರಿ ಒದಗಿಸಲು ತಂಡ ತೀರ್ಮಾನಿಸಿದೆ.
ಘಟನೆ 4: ಮೂಡುಶೆಡ್ಡೆ ಶಿವನಗರದ ವೆರೋನಿಕಾ ಡಿಸಿಲ್ವ ತನ್ನ ಗಂಡನ ಜೊತೆ ವಾಸಿಸುತ್ತಿದ್ದಾರೆ. ಅವರಿಗೆ ಮಕ್ಕಳಿಲ್ಲ. ಸಣ್ಣ ಜೋಪಡಿಯಲ್ಲಿ ವಿದ್ಯುತ್ ಕೂಡ ಇಲ್ಲ. ಸಂದರ್ಶಿಸಿದ ನಿಯೋಗ ವಿದ್ಯುತ್ ಒದಗಿಸಲು ನಿರ್ಣಯಿಸಿದೆ.
ಘಟನೆ 5: ವಾಮಂಜೂರು ಆದರ್ಶ ನಗರದ ಪಿಯಾಡ್ ಕ್ರಾಸ್ತಾ ವಿಧವೆ. ಇರುವ ಒಬ್ಬ 40ರ ಹರೆಯದ ಮಗನಿಗೆ ಅನಾರೋಗ್ಯ ಪೀಡಿತನಾಗಿದ್ದಾನೆ. ಜೋಪಡಿಯಲ್ಲಿರುವ ಆ ಕುಟುಂಬಕ್ಕೆ ಪ್ರತಿ ತಿಂಗಳು ಆಹಾರ ಸಾಮಗ್ರಿ ಒದಗಿಸಲು ತಂಡ ತೀರ್ಮಾನಿಸಿದೆ.
ಮೂರು ಹಿಂದೂ, ಎರಡು ಕ್ರೈಸ್ತ ಕುಟುಂಬಗಳನ್ನು ಸಂದರ್ಶಿಸಿದ ತಂಡ ಸಮಸ್ಯೆಗಳಿಗೆ ಸ್ಪಂದಿಸಿದೆ. ಈ ಸಂದರ್ಭ ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಆಸಿಫ್ ಡೀಲ್ಸ್ ಜುಬೈಲ್, ಬಶೀರ್ ಟಿ.ಕೆ. ಫರಂಗಿಪೇಟೆ, ಅಬ್ದುರ್ರಝಾಕ್ ಅನಂತಾಡಿ, ತಂಡಕ್ಕೆ ಮಾಹಿತಿ ನೀಡಿದ ವಾಮಂಜೂರು ಧರ್ಮಜ್ಯೋತಿ ಸೋಶಿಯಲ್ ಆರ್ಗನೈಸೇಶನ್ ನ ಲಿಲ್ಲಿ ಮೇರಿ ಮೊದಲಾದವರು ಉಪಸ್ಥಿತರಿದ್ದರು.
"5 ಮನೆಗಳಿಗೆ ಭೇಟಿ ನೀಡಿ ಭರವಸೆ ಕೊಟ್ಟ ತಕ್ಷಣ ಸೇವೆ ಪ್ರಾರಂಭಿಸಲಾಗಿದೆ. ಭವಾನಿ ಶೆಟ್ಟಿ ಮನೆಯ ಶೌಚಾಲಯ ಕೆಲಸ ಪ್ರಾರಂಭವಾಗಿದೆ. ಮೋಹಿನಿ ಹಾಗೂ ಪಿಯಾಡ್ ಕ್ರಾಸ್ತಾ ಅವರಿಗೆ ಜುಲೈ ತಿಂಗಳಿನಿಂದ ಆಹಾರ ಸಾಮಗ್ರಿ ನೀಡಲು ಪ್ರಾರಂಭಿಸಿದ್ದೇವೆ. ವೆರೋನಿಕಾ ಡಿಸಿಲ್ವ ಮನೆಯ ವಿದ್ಯುತ್ ಕಾಮಗಾರಿ ಆರಂಭವಾಗಿದೆ. ಐತಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಔಷಧಿ ಒದಗಿಸುವ ಕೆಲಸ ಮಾಡುತ್ತೇವೆ" ಎಂದು ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ತಿಳಿಸಿದ್ದಾರೆ.
ಹಿದಾಯ ಫೌಂಡೇಶನ್ ತಂಡ ಕಾವಳಕಟ್ಟೆ ಎಂಬಲ್ಲಿ ಹಿದಾಯ ಕಾಲನಿಯನ್ನು ಹೊಂದಿದೆ. 5 ಎಕ್ರೆಯ ವಿಶಾಲ ಕಾಲನಿಯಲ್ಲಿ 60 ವಿಧವಾ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದೆ. ವಿಕಲಚೇತನ ಮಕ್ಕಳ ಶಾಲೆಯನ್ನೂ ತೆರೆದಿದೆ. ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಬೇಧವಿಲ್ಲದೆ 285 ಬಡ ಕುಟುಂಬಗಳಿಗೆ ಪ್ರತಿ ತಿಂಗಳು ನಿರಂತರ ರೇಶನ್ ಸಾಮಗ್ರಿ ಒದಗಿಸುತ್ತಿದೆ.
ಕೋಮುಗಲಭೆಗಳಿಗೆ ತುತ್ತಾದ ಜಿಲ್ಲೆಯಲ್ಲಿ ಒಬ್ಬರನ್ನೊಬ್ಬರು ಸಂಶಯದ ದೃಷ್ಟಿಯಿಂದ ನೋಡುತ್ತಿರುವ ಇಂದಿನ ದಿನಗಳಲ್ಲಿ ಧರ್ಮ, ಜಾತಿ-ಮತಗಳ ಭೇದವಿಲ್ಲದೆ ಅಸಹಾಯಕರಿಗೆ ಸಹಾಯಹಸ್ತ ಚಾಚಿದ "ಹಿದಾಯ ಫೌಂಡೇಶನ್"ನ ಕಾರ್ಯ ಅಭಿನಂದನಾರ್ಹ.







