ಲಂಡನ್ ಚಾಂಪಿಯನ್‌ಶಿಪ್: ಕೇರಳದ ವಿದ್ಯಾರ್ಥಿನಿ ಪಿ.ಯು.ಚಿತ್ರಾಗೆ ಸ್ಥಾನ

ಕೊಚ್ಚಿ, ಜು.9: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಹಳ್ಳಿಯೊಂದರ 22ರ ಹರೆಯದ ಓಟಗಾರ್ತಿ ಪಿ.ಯು. ಚಿತ್ರಾ ಶುಕ್ರವಾರ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಮಹಿಳೆಯರ 1500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಶುಕ್ರವಾರ ಕಳಿಂಗ ಸ್ಟೇಡಿಯಂನಲ್ಲಿ ತುಂತುರು ಮಳೆಯ ನಡುವೆಯೂ ವೇಗವಾಗಿ ಓಡಿದ ಕೇರಳದ ಚಿತ್ರಾ 4 ನಿಮಿಷ 17:92 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಈ ಸಾಧನೆಯ ಮೂಲಕ ಲಂಡನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ಸಫಲರಾಗಿದ್ದಾರೆ.
‘‘ಖಂಡಿತವಾಗಿಯೂ ನಾನು ಚಿನ್ನವನ್ನು ನಿರೀಕ್ಷಿಸಿರಲಿಲ್ಲ. ಈ ಟೂರ್ನಿಗೆ ಮೊದಲು ನನ್ನ ವೈಯಕ್ತಿಕ ಸಾಧನೆ 4 ನಿಮಿಷ 24 ಸೆಕೆಂಡ್ ಆಗಿತ್ತು. ಕಳೆದ ವರ್ಷ ಫೆಡರೇಶನ್ ಕಪ್‌ನಲ್ಲಿ ಈ ಸಾಧನೆ ಮಾಡಿ ರಾಷ್ಟ್ರೀಯ ತಂಡ ಸೇರಿಕೊಂಡಿದ್ದೆ. ಗುರಿ ತಲುಪಲು 250 ಮೀ. ದೂರವಿರುವಾಗ ನನಗೆ ಒಮ್ಮೆಲೇ ಹೆಚ್ಚಿನ ಶಕ್ತಿಬಂತು. ಎಲ್ಲರನ್ನೂ ಹಿಂದಿಕ್ಕಿ ಮೊದಲ ಸ್ಥಾನ ಪಡೆದೆ. ನನ್ನ ಈ ಸಾಧನೆಯ ಬಳಿಕ ಎಲ್ಲರೂ ಏಷ್ಯನ್ ಕ್ವೀನ್ ಎಂದು ಕರೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ’’ ಎಂದು ದಿನಗೂಲಿ ದಂಪತಿಯ ನಾಲ್ಕು ಮಕ್ಕಳ ಪೈಕಿ ಮೂರನೆಯವರಾದ ಚಿತ್ರಾ ಸಂತೋಷ ವ್ಯಕ್ತಪಡಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒ.ಪಿ. ಜೈಶಾ ಹಾಗೂ ಪ್ರೀಜಾ ಶ್ರೀಧರನ್ ಬಳಿಕ 1,500ಮೀ. ಓಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕೇರಳದ ಮೂರನೆ ಅಥ್ಲೀಟ್ ಚಿತ್ರಾ.
ಲಂಡನ್ ಕನಸನ್ನು ಈಡೇರಿಸಿಕೊಂಡಿರುವ ಚಿತ್ರಾ ಇದೇ ಫಾರ್ಮ್‌ನ್ನು ಕಾಯ್ದುಕೊಂಡು ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಚಿತ್ರಾ ಕಳೆದ 10 ವರ್ಷಗಳಿಂದ ಮುಂಡುರ್ ಎಚ್‌ಎಸ್‌ಎಸ್‌ನ ದೈಹಿಕ ಶಿಕ್ಷಣ ಶಿಕ್ಷಕ ಸಿಜಿನ್‌ರಿಂದ ತರಬೇತಿ ಪಡೆಯುತ್ತಿದ್ದಾರೆ. ಭುವನೇಶ್ವರದಲ್ಲಿ ಚಿತ್ರಾರ ಚಿನ್ನದ ಸಾಧನೆಗೆ ಕೋಚ್ ಸಂತೋಷಗೊಂಡಿದ್ದಾರೆ.
‘‘ಚಿತ್ರಾರ ಪ್ರದರ್ಶನ ನನಗೆ ತುಂಬಾ ಹೆಮ್ಮೆ ತಂದಿದೆ.ಸೀಮಿತ ವ್ಯವಸ್ಥೆಗಳಿರುವ ಗ್ರಾಮೀಣ ಪ್ರದೇಶದಲ್ಲಿ ವಿಶ್ವ ದರ್ಜೆಯ ಅಥ್ಲೀಟ್‌ನ್ನು ತಯಾರು ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’’ ಎಂದು ಕೇರಳ ಸರಕಾರದ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣದ ಶಿಕ್ಷಕರಾಗಿರುವ ಸಿಜಿನ್ ಅಭಿಪ್ರಾಯಪಟ್ಟರು.
‘‘ಆದಷ್ಟು ಬೇಗನೆ ಸರಕಾರಿ ಕೆಲಸವೊಂದನ್ನು ಗಿಟ್ಟಿಸಿಕೊಂಡು ತಂದೆ-ತಾಯಂದಿರಿಗೆ ನೆರವಾಗುವುದು ನನ್ನ ಮುಖ್ಯ ಆದ್ಯತೆ. ನಾನೀಗ ಉತ್ತಮ ಸಾಧನೆ ಮಾಡಿದ್ದು, ನನ್ನ ಸಾಧನೆಯನ್ನು ಎಲ್ಲರೂ ಗುರುತಿಸುವ ವಿಶ್ವಾಸದಲ್ಲಿದ್ದೇನೆ’’ ಎಂದು ಶ್ರೀಕೃಷ್ಣಪುರಂನ ವಿಟಿಬಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಚಿತ್ರಾ ಹೇಳಿದ್ದಾರೆ.







