ಮಧುಮೇಹಿಗಳು ಪಪ್ಪಾಯಿ ಹಣ್ಣು ತಿನ್ನಬಹುದೇ...?
ಇಂದಿನ ದಿನಗಳಲ್ಲಿ ಮಧುಮೇಹದ ಬಗ್ಗೆ ಕೇಳದವರಿಲ್ಲ. ಸಿಹಿತಿಂಡಿಗಳ ಪ್ರೇಮಿಗಳು ಮಧುಮೇಹ ಎಂಬ ಶಬ್ದ ಕೇಳಿದರೇ ಹೆದರಿಕೊಳ್ಳುತ್ತಾರೆ. ಆದರೆ ಅದರ ಬಗ್ಗೆ ನಮಗೆಲ್ಲ ಎಷ್ಟರ ಮಟ್ಟಿಗೆ ಗೊತ್ತು?
ನಮ್ಮ ಶರೀರದಲ್ಲಿ ಇನ್ಸುಲಿನ್ ಎಂದು ಕರೆಯಲಾಗುವ ಹಾರ್ಮೋನ್ ಉತ್ಪಾದನೆ ಕಡಿಮೆಯಾದರೆ ಅದು ಮಧುಮೇಹಕ್ಕೆ ಕಾರಣವಾಗುತ್ತದೆ. ಮೇದೋಜ್ಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಇನ್ಸುಲಿನ್ ನಮ್ಮ ಆಹಾರದಲ್ಲಿರುವ ಸಕ್ಕರೆ ಜೀರ್ಣಗೊಳ್ಳಲು ಮತ್ತು ಅದನ್ನು ಕಾದಿರಿಸುವಲ್ಲಿ ನೆರವಾಗುತ್ತದೆ. ಇನ್ಸುಲಿನ್ ಉತ್ಪಾದನೆ ಕುಂಠಿತಗೊಂಡರೆ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ನಮ್ಮ ಶರೀರಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಇದು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಹೀಗಾಗಿ ಉತ್ಪಾದನೆಯ ಕೊರತೆಯನ್ನು ತುಂಬಲು ಮಧುಮೇಹಿಗಳ ಶರೀರಕ್ಕೆ ಇಂಜೆಕ್ಷನ್ ಮೂಲಕ ಇನ್ಸುಲಿನ್ ಸೇರಿಸಲಾಗುತ್ತದೆ.
ಯಾವುದೇ ವ್ಯಕ್ತಿ ಮಧುಮೇಹಿಯೆಂದು ಗೊತ್ತಾದಾಗ ಜನರು ಎಲ್ಲ ಬಗೆಯ ಉಪದೇಶಗಳನ್ನು ನೀಡಲು ಆರಂಭಿಸುತ್ತಾರೆ. ಸಿಹಿ ಮಾತ್ರವಲ್ಲ, ಹಣ್ಣುಗಳ ಸೇವನೆ ಕೂಡ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಹೀಗಾಗಿ ಅವುಗಳನ್ನು ವರ್ಜಿಸುವಂತೆ ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ಅದು ಹಾಗಲ್ಲ. ಎಲ್ಲ ಹಣ್ಣುಗಳೂ ಮಧುಮೇಹಿಗಳಿಗೆ ಕೆಡುಕನ್ನುಂಟು ಮಾಡುತ್ತವೆ ಎಂದೇನಿಲ್ಲ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೆರವಾಗುವ ಕೆಲವು ಹಣ್ಣುಗಳೂ ಇವೆ.
ಪಪ್ಪಾಯಿಯಂತಹ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಹೊಂದಿರುವು ದರಿಂದ ಅವನ್ನು ತಿನ್ನದಂತೆ ಜನರು ಆಗಾಗ್ಗೆ ಮಧುಮೇಹಿಗಳಿಗೆ ಬಿಟ್ಟಿ ಸಲಹೆ ನೀಡುತ್ತಿರುತ್ತಾರೆ. ಕಿತ್ತಳೆಯಂತಹ ಸಿಟ್ರಸ್ ವರ್ಗಕ್ಕೆ ಸೇರಿದ ಕೆಲವು ಹಣ್ಣುಗಳು ಮಧುಮೇಹಿಗಳಿಗೆ ಕೆಟ್ಟದ್ದಾಗಿದ್ದರೂ ಪಪ್ಪಾಯಿ ಖಂಡಿತವಾಗಿಯೂ ಕೆಟ್ಟದ್ದಲ್ಲ.
ಮಧುಮೇಹಿಗಳಿಗೆ ಪಪ್ಪಾಯಿ ಒಳ್ಳೆಯದು ಎನ್ನುವುದಕ್ಕೆ ಕಾರಣಗಳಿಲ್ಲಿವೆ........
ಕಡಿಮೆ ಸಕ್ಕರೆ: ಪಪ್ಪಾಯಿಯಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿ, ಅಂದರೆ ಒಂದು ಕಪ್ನಲ್ಲಿ 8.3 ಗ್ರಾಂ ಇರುತ್ತದೆ. ಪಪ್ಪಾಯಿಯಲ್ಲಿರುವ ನಿರ್ದಿಷ್ಟ ಸಂಂಯುಕ್ತವೊಂದು ಟೈಪ್ 2 ಮಧುಮೇಹವನ್ನು ನಿಧಾನಗೊಳಿಸುತ್ತದೆ ಎನ್ನುವುದನ್ನು ಅಧ್ಯಯನಗಳು ಬೆಳಕಿಗೆ ತಂದಿವೆ.ಅಲ್ಲದೆ ಅದರಲ್ಲಿ ‘ಪಪಾಯಿನ್’ಎಂಬ ಕಿಣ್ವವು ಸಮೃದ್ಧವಾಗಿದ್ದು, ಇದು ಹಾನಿಕಾರಕ ಮುಕ್ತಕಣಗಳ ವಿರುದ್ಧ ಮಧುಮೇಹಿಗಳಿಗೆ ರಕ್ಷಣೆಯನ್ನು ನೀಡುತ್ತದೆ.
ಸಮೃದ್ಧ ವಿಟಾಮಿನ್: ಪಪ್ಪಾಯಿ ಹಣ್ಣು ‘ಎ’ ಮತ್ತು ‘ಸಿ’ವಿಟಾಮಿನ್ಗಳು, ಕ್ಯಾಲ್ಸಿಯಂ, ಮೆಗ್ನೇಷಿಯಂ, ಕಬ್ಬಿಣ ಇತ್ಯಾದಿಗಳನ್ನು ಒಳಗೊಂಡಿದ್ದು, ಇವು ಮಧುಮೇಹಿಗಳಿಗೆ ಹೃದ್ರೋಗಗಳಿಂದ ರಕ್ಷಣೆ ನೀಡುತ್ತವೆ.
ನಾರಿನ ಕಣಜ: ಪಪ್ಪಾಯಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನಾರನ್ನು ಹೊಂದಿದೆ. ಉಪಾಹಾರದ ವೇಳೆ ಸಾಕಷ್ಟು ಪಪ್ಪಾಯಿ ಹಣ್ಣು ತಿನ್ನುವುದರಿಂದ ಹೊಟ್ಟೆ ಸುದೀರ್ಘ ಸಮಯದವರೆಗೆ ತುಂಬಿಯೇ ಇರುತ್ತದೆ. ನೆನಪಿಡಿ,ಮಧುಮೇಹಿಗಳು ತುಂಬ ಹೊತ್ತು ಹಸಿವೆಯಿಂದಿರಬಾರದು.
ಕಡಿಮೆ ಗ್ಲೈಸೇಮಿಕ್ ಇಂಡೆಕ್ಸ್: ಪಪ್ಪಾಯಿ ಕಡಿಮೆ ಗ್ಲೈಸೇಮಿಕ ಸೂಚಿಯನ್ನು ಹೊಂದಿದೆ, ಅಂದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ತನ್ನಲ್ಲಿನ ನೈಸರ್ಗಿಕ ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆಗೊಳಿಸುತ್ತದೆ. ಮಧುಮೇಹಿಗಳು ಪಪ್ಪಾಯಿ ಹಣ್ಣನ್ನೇಕೆ ತಿನ್ನಬೇಕು ಎನ್ನುವುದಕ್ಕೆ ಖಂಡಿತವಾಗಿಯೂ ಇದು ಒಳ್ಳೆಯ ಕಾರಣವಾಗಿದೆ.