ಸೆಪ್ಟೆಂಬರ್ ವೇಳೆಗೆ ಬೀದಿ ವ್ಯಾಪಾರಿಗಳಿಗೆ ಮಳಿಗೆ ಹಸ್ತಾಂತರ
ಬೆಂಗಳೂರು, ಜು. 10: ನಗರದ ಮಡಿವಾಳದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆಯಲ್ಲಿ 100 ಮಳಿಗೆಗಳನ್ನು ಮುಂದಿನ ಎರಡು ತಿಂಗಳ ಒಳಗೆ ಬೀದಿ ವ್ಯಾಪಾರಿಗಳಿಗೆ ಹಸ್ತಾಂತರಿಸಲಾಗುವುದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಡಿವಾಳ ಮಾರುಕಟ್ಟೆ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಪದ್ಮಾವತಿ ಅವರೊಂದಿಗೆ ಮಾರುಕಟ್ಟೆ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿದ್ದ ಅವಧಿಯಲ್ಲಿ 14 ಕೋಟಿ ರೂ. ವೆಚ್ಚದಲ್ಲಿ 440 ಅಂಗಡಿಗಳ ಆರಂಭಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಕಾಮಗಾರಿ ಕುಂಠಿತವಾದ್ದರಿಂದ ಮಳಿಗೆಗಳ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲ ಎಂದು ಹೇಳಿದರು.
ಕಾಮಗಾರಿ ವಿಳಂಬದಿಂದಾಗಿ 21 ಕೋಟಿ ರೂ. ಹೆಚ್ಚುವರಿಯಾಗಿದೆ. ಅನುದಾನದಲ್ಲಿ ಹೊಂದಾಣಿಕೆ ಮಾಡಿಕೊಂಡು ಎಲ್ಲಾ ಮಳಿಗೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಒಟ್ಟು 68 ಮಳಿಗೆಗಳು ಪೂರ್ಣಗೊಂಡಿವೆ. 28 ಮಳಿಗೆಗಳಿಗೆ ಅಡಿಪಾಯ ಹಾಕಲಾಗಿದೆ. ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಬೀದಿಬದಿ ವ್ಯಾಪಾರಿಗಳಿಗೆ ಈ ಮಳಿಗೆಗಳನ್ನು ವಿತರಿಸಲಾಗುವುದು. ಈ ಮಾರುಕಟ್ಟೆ ಸಮುಚ್ಛಯದಲ್ಲೇ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದು ತಿಳಿಸಿದರು.
ಮೇಯರ್ ಪದ್ಮಾವತಿಯವರು ಮಾತನಾಡಿ, ಈ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಕಾಮಗಾರಿಗೆ ಹೆಚ್ಚುವರಿಯಾಗಿರುವ 21 ಕೋಟಿ ರೂ. ವೆಚ್ಚವನ್ನು ಮುಂದಿನ ಬಜೆಟ್‌ನಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದರು.