ಮಳೆಗಾಲದಲ್ಲಿ ಯಡಿಯೂರಪ್ಪರ ಬರಪರಿಶೀಲನೆ ನಾಟಕ: ಐವನ್ ಡಿಸೋಜ

ಕಾಪು, ಜು.10: ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಬರಪರಿಶೀಲನೆ ನಡೆಸುವ ಬಿಜೆಪಿ ಮುಖಂಡ ಯಡಿಯೂರಪ್ಪ ಅವರ ನಾಟಕ ಜನರಿಗೆ ತಿಳಿದಿದೆ ಎಂದು ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಕಾಪು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಪು ಪೇಟೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಒಂದು ದೊಡ್ಡ ನಾಟಕ ಕಂಪೆನಿ. ನಾಟಕ ಕಂಪೆನಿಯಲ್ಲಿ ಪ್ರಶಸ್ತಿ ಕೊಡಬೇಕಿದ್ದರೆ ಮೊದಲು ಬಿಜೆಪಿಗೆ ನೀಡಬೇಕು ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುತಿದ್ದ ಅವರು, ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ ಬಳಿಕ ಕೇಂದ್ರದ ವಿರುದ್ಧ ಒತ್ತಾಯ ಮಾಡುತಿಲ್ಲ. ಮೋದಿಯ ಮುಂದೆ ಹೋಗಿ ಮೌನರಾಗುವ ಇವರು ಕೇಂದ್ರ ಸರ್ಕಾರ ಮೂರು ವರ್ಷಗಳಲ್ಲಿ ಜನಪರ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲಿ ಎಂದರು.
ಶವದ ಮುಂದೆ ರಾಜಕೀಯ ಬೇಡ: ಎಲ್ಲಿಯಾದರೂ ಹೆಣ ಬಿದ್ದಾಗ ಹೋಗಿ ನೋಡಿ ರಾಜಕೀಯದ ನಾಟಕವಾಡುವ ಸಂಸದೆ ಶೋಭಾ ಕರಂದ್ಲಾಜೆ ಅವರು ನಡೆಸಿದ ಸಾಧನೆ ಏನು ಎಂದು ಪ್ರಶ್ನಿಸಿ ಡಿಸೋಜ, ಕೇವಲ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ಶೋಭಕ್ಕ 3 ವರ್ಷಗಳಲ್ಲಿ ಕೇಂದ್ರದ ಯಾವ ಯೋಜನೆಗಳನ್ನು ತಮ್ಮ ಕ್ಷೇತ್ರದಲ್ಲಿ ಜಾರಿಮಾಡಿದ್ದೀರಿ ಎಂದು ಪಟ್ಟಿ ಮಾಡಿ ಜನತೆಗೆ ತಿಳಿಸಿ ಎಂದು ಸವಾಲು ಹಾಕಿದರು. ಗುಂಪು ಘರ್ಷಣೆ ನಾಟಕಗಳು ಬೇಕಿಲ್ಲ. ಕೇವಲ ಜನಮರುಳು ಮಾತುಗಳಿಂದ ಜನಸಾಮಾನ್ಯರನ್ನು ಇನ್ನು ವಂಚಿಸಲು ಸಾಧ್ಯವಿಲ್ಲ. 150 ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಸಲು ಅಸಮರ್ಥರಾಗುತ್ತಿರುವ ಬಿಜೆಪಿ ಗೆಲ್ಲುವುದು ಬಿಡಿ ಇಡುಗಂಟು ಪಡಕೊಳ್ಳುವುದನ್ನು ಯೋಚಿಸಲಿ.2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಇನ್ನೆಲ್ಲಿಯ 150+ ಸೀಟು ಎಂದು ಪ್ರಶ್ನಿಸಿದರು.
ಪ್ರತಿಭಟನಾ ಸಭೆಯ ಆರಂಭದಲ್ಲಿ ಕಾಪು ವಿದ್ಯಾನಿಕೇತನ್ ಶಾಲೆಯ ಬಳಿಯಿಂದ ಕಾಪು ಪೇಟೆಯವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಪ್ರತಿಭಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಕೇಂದ್ರ ಸರ್ಕಾರದ ವಿರುದ್ಧದ ಮತಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳ ಕೂಗಿದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಡಿ, ರಾಜ್ಯ ಸರಕಾರ ವಿನಂತಿಸಿದರೂ ವಾಣಿಜ್ಯ ಬ್ಯಾಂಕ್‌ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ದೇಶಕ್ಕೆ ಅನ್ನ ಕೊಡುವ ರೈತರು ನಾನಾ ಕಾರಣಗಳಿಂದ ಸಾಲ ಕಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೇಸ್ ಸರಕಾರವು 50 ಸಾವಿರ ತನಕದ ಸಾಲವನ್ನು ಮನ್ನಾ ಮಾಡಿದ್ದು, 22 ಲಕ್ಷ ರೈತರಿಗೆ ಲಾಭವಾಗಿದೆ. ಇದರಿಂದ ರೂ.8,165 ಕೋಟಿ ಹೆಚ್ಚವರಿ ಹೊರೆ ರಾಜ್ಯ ಬೊಕ್ಕಸಕ್ಕೆ ಬೀಳಲಿದೆ. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರ ವಿನಂತಿಸಿದರೂ ವಾಣಿಜ್ಯ ಬ್ಯಾಂಕ್‌ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. 3 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಯಾವುದೇ ಬೇಡಿಕೆಯನ್ನು ಪೂರೈಸುತ್ತಿಲ್ಲ ಎಂದು ದೂರಿದರು.
ರೈತರು ಸಂಕಷ್ಟದಲ್ಲಿದ್ದು, ತೀವ್ರ ಬರಗಾಲ ಎದುರಿಸುತ್ತಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಕಣ್ಣಿಗೆ ಮಣ್ಣು ಎರೆಚುವ ಕೆಲಸ ಮಾಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರಣಾಳಿಕೆಯ ಯಾವುದನ್ನೂ ಅನುಷ್ಠಾನಕ್ಕೆ ತರಳಿಲ್ಲ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುವ ಯಡಿಯೂರಪ್ಪ, ಮೋದಿ ಮುಂದೆ ಹೋಗಿ ಮೌನವಾಗುತ್ತಾರೆ ಎಂದು ಅವರು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಕಾಪು ಬ್ಲಾಕ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಯು.ಆರ್.ಸಭಾಪತಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎ.ಗಫೂರ್, ಅಮೃತ್ ಶೆಣೈ, ದೇವಿಪ್ರಸಾದ್ ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ವಿಶ್ವಾಸ್ ಅಮೀನ್, ಗುಲಾಂ ಮುಹಮ್ಮದ್, ಪುರಸಭಾ ಅಧ್ಯಕ್ಷೆ ಸೌಮ್ಯ, ಎಂ.ಪಿ.ಮೊಯಿದಿನಬ್ಬ ಹಲವು ಮುಖಂಡರು ಭಾಗವಹಿಸಿದರು.







