ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಯುವ ಕಾಂಗ್ರೆಸ್‌ನಿಂದ ಸಂಸದರ ಕಚೇರಿ ಎದುರು ಧರಣಿ

ಚಿಕ್ಕಮಗಳೂರು, ಜು.10: ರೈತರ ಸಾಲ ಮನ್ನಾ ಮಾಡದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತ ವಿರೋಧಿ ನೀತಿಯನ್ನು ಖಂಡಿಸಿ ಉಡುಪಿ-ಚಿಕ್ಕಮಗಳೂರು ಸಂಸತ್ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಈಗಾಗಲೇ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ತನ್ನ ರೈತಪರವಾದ ದೋರಣೆಗೆ ಕಟಿಬದ್ದವಾಗಿದೆ. ರಾಜ್ಯದಲ್ಲಿ 8,125 ಕೋಟಿ ರೂ.ಗಳ ಸಾಲ ಮನ್ನಾ ವಿಚಾರ ಸಣ್ಣ ಮಟ್ಟದ ವಿಚಾರವೇನಲ್ಲ. ರಾಜ್ಯದಲ್ಲಿ ಹೆಚ್ಚುವರಿ ಆದಾಯದ ಮೂಲಗಳಿಲ್ಲದಿದ್ದರೂ, ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಸಿದ್ದರಾಮಯ್ಯ ಸರಕಾರ ಯೋಜನಾಬದ್ದ ರೀತಿಯಲ್ಲಿ ರೈತರ ಸಾಲವನ್ನು ಮನ್ನಾಗೊಳಿಸುವ ಮೂಲಕ ಸಂಕಷ್ಟದಲ್ಲಿರುವ ರೈತಾಪಿಗಳಿಗೆ ಆಸರೆಯಾಗಿ ನಿಂತಿರುವರೆಂದು ಪ್ರತಿಭಟನಾಕಾರರು ಹೇಳಿದ್ದಾರೆ.
ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ ಮೇಲೆ ಕೇಂದ್ರ ಸರಕಾರ ಮನ್ನಾ ಮಾಡುವಂತೆ ಒತ್ತಡ ಹೇರುವ ಭರವಸೆ ನೀಡಿದ್ದ ರಾಜ್ಯದ ಬಿಜೆಪಿ ಸಂಸದರು ಹಾಗೂ ಬಿಜೆಪಿ ನಾಯಕರು ಇಂದು ರೈತರ ಬಗ್ಗೆ ಯಾವುದೇ ಕಾಳಜಿಯೂ ತೋರದೆ ನಿರ್ಲಜ್ಜ ರಾಜಕೀಯ ನಡೆಸುತ್ತಿದ್ದಾರೆ. ರಾಷ್ಟ್ರೀಯ ಬಿಜೆಪಿ ನಾಯಕರು ರೈತರ ಸಾಲ ಮನ್ನಾಗೊಳಿಸುವುದು ಸಾದ್ಯವಿಲ್ಲವೆಂದು ಹೇಳಿಕೊಂಡಿರುವಾಗ ರಾಜ್ಯದ ಬಿಜೆಪಿ ಮುಖಂಡರು ನಾಚಿಕೆಗೆಟ್ಟ ರಾಜಕೀಯ ನಡೆಸುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ರಾಜ್ಯದ 17 ಸಂಸದರು ಸಂಸತ್ ಭವನದ ಎದುರು ಉಪವಾಸ ಕೂತು ರೈತರ ಸಾಲವನ್ನು ಮನ್ನಾಗೊಳಿಸಲಿ. ಇಲ್ಲದಿದ್ದರೆ ಅವರು ಕೂಡ ರಾಜಿನಾಮೆ ಕೊಟ್ಟು ತಮ್ಮ ಕೈಲಾಗುವುದಿಲ್ಲ ಎಂದು ರಾಜಕೀಯ ನಿವೃತ್ತಿ ಪಡೆಯಲಿ. ಇಂದು ಮೋದಿ ಸರಕಾರ ಯಾವುದೇ ರೀತಿಯಲ್ಲೂ ಬಡವರ ಪರ, ರೈತರ ಪರವಾದ ಸರಕಾರವಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಟೀಕಿಸಿದರು.
ಮುಂದಿನ 30 ದಿನಗಳಲ್ಲಿ ಕೇಂದ್ರ ಸರಕಾರ ರೈತರ ಸಾಲವನ್ನು ಮನ್ನಾ ಮಾಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಯುವ ಕಾಂಗ್ರೆಸ್ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಮಯದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್, ರಾಜ್ಯ ಯುವ ಕಾರ್ಯದರ್ಶಿ ಪುಷ್ಪಲತಾ, ಉಪಾಧ್ಯಕ್ಷ ಕಾರ್ತಿಕ್ ಚೆಟ್ಟಿಯಾರ್, ಯುವ ಕಾಂಗ್ರೆಸ್‌ನ ರಾಹೀಲ್, ತಿಲಕ್, ರೂಬೆನ್ ಮೋಸೇಸ್, ಸಿಲ್ವಸ್ಟರ್, ಸಂದೇಶ್, ವಿನೋದ್, ರುಕ್ಸಾನಾ, ರಾಮಚಂದ್ರ, ಫಾತೀಮಾ ಮತ್ತಿತರರಿದ್ದರು.







