ಅಧಿಕಾರಿಗಳ ಗೈರು: ಗ್ರಾಮಸ್ಥರ ಅಸಮಾಧಾನ
ಹಳೆಯಂಗಡಿ ಗ್ರಾಮಸಭೆ

ಮುಲ್ಕಿ, ಜು.10: ಕದಿಕೆ ಸಾಲ್ಯಾನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಸೋಮವಾರ ನಡೆದ ಹಳೆಯಂಗಡಿ ಗ್ರಾಮದ ವ್ಯಾಪ್ತಿಯ ಪ್ರಥಮ ಹಂತದ ಗ್ರಾಮ ಸಭೆಗೆ ಅಧಿಕಾರಿಗಳ ಗೈರು ಹಾಜರಿಯಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಯಿತು.
ವರ್ಷಕ್ಕೆ ಎರಡು ಬಾರಿ ನಡೆಯುವ ಗ್ರಾಮದ ಅಭಿವೃದ್ಧಿಗಾಗಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುವ ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಹಾಜರಾದರೂ ಸಹ ಅವರ ಮೇಲೆ ಯಾವುದೇ ಶಿಸ್ತು ಕ್ರಮ ಯಾಕಿಲ್ಲ. ಅಧಿಕಾರಿಗಳು ಬಾರದ ಗ್ರಾಮ ಸಭೆ ಯಾವ ಪುರುಷಾರ್ಥಕ್ಕಾಗಿ ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿಯೂ ಪ್ರಸ್ತಾವನೆಯಾಗಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ನಂದಾ ಪಾಸ್, ಸಮಾಜ ಕಲ್ಯಾಣ ಇಲಾಖೆಯಡಿ ಬಹಳಷ್ಟು ಯೋಜನೆಗಳು ಅಲ್ಪಸಂಖ್ಯಾತರು ಮತ್ತು ಪರಿಶೀಷ್ಟರಿಗಾಗಿ ಮೀಸಲಿದೆ. ಆದರೆ ಅಧಿಕಾರಿಗಳೇ ಗ್ರಾಮ ಸಭೆಗೆ ಬಾರದಿದ್ದರೆ ಗ್ರಾಮಸ್ಥರಿಗೆ ಮಾಹಿತಿ ಲಭ್ಯವಾಗವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಗ್ರಾಮಸ್ಥರ ಆಕ್ಷೇಪಕ್ಕೆ ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಉತ್ತರಿಸಿ, ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯ ನೆಪ ಹಾಗೂ ಒಂದೇ ದಿನದಲ್ಲಿ ಹಲವು ಕಡೆಗಳಲ್ಲಿ ಗ್ರಾಮ ಸಭೆಯು ನಡೆಯುದರಿಂದ ಎಲ್ಲಾ ಕಡೆಗೆ ಹೋಗಲಾಗುವುದಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತದೆ. ಗೈರು ಹಾಜರಾದ ಅಧಿಕಾರಿಗಳ ಇಲಾಖೆಗೆ ಪಂಚಾಯತ್ ಪತ್ರ ಬರೆದು ಮುಂದಿನ ಸಭೆಗೆ ಹಾಜರಿರುವಂತೆ ತಿಳಿಸಬೇಕು ಎಂದರು.
ಪಡಿತರ ಸಮಸ್ಯೆ: ಪಡಿತರ ಚೀಟಿ ವ್ಯವಸ್ಥೆ ಬಹಳ ಸಮಸ್ಯೆ ತಂದಿದೆ. ಪಡಿತರ ಸಾಮಾಗ್ರಿ ಸರಿಯಾಗಿ ಲಭ್ಯವಿಲ್ಲ ಎಂದು ಗ್ರಾಮಸ್ಥರು ದೂರಿದರು. ಎಪಿಎಲ್‌ನಿಂದ ಬಿಪಿಎಲ್ ಪಡಿತರ ಚೀಟಿಗೆ ವರ್ಗಾಯಿಸುವಲ್ಲಿ ತೊಡಕಾಗಿದೆ. ಸರಕಾರದ ನಿರ್ದೇಶನದಂತೆ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದೆ. ಹೊಸ ಆದೇಶ ಬರುವವರೆಗೆ ತಿದ್ದುಪಡಿ ಇನ್ನಿತರ ವ್ಯವಸ್ಥೆ ಇನ್ನೂ ನಡೆದಿಲ್ಲ. ಹೊಸ ಪಡಿತರ ಚೀಟಿಯನ್ನು ಪಡೆಯಲು ಸೂಕ್ತ ಮಾನದಂಡ ನೀಡಲಾಗಿದೆ ಎಂದು ಆಹಾರ ಮತ್ತು ಪಡಿತರ ವಿತರಣಾ ಸಹಾಯಕ ನಿರ್ದೇಶಕ ವಾಸು ಶೆಟ್ಟಿ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
ಹಳೆಯಂಗಡಿಗೆ ಹೊಸ ಮೆಸ್ಕಾಂ ಶಾಖಾ ಕಚೇರಿ ಸ್ಥಾಪನೆಯಾಗಿ ವರ್ಷಗಳಾಗಿದ್ದರೂ ಸುಧಾರಣೆ ಬಂದಿಲ್ಲ ಸಂಜೆ ಅಥವಾ ರಾತ್ರಿ ವಿದ್ಯುತ್ ನಿಲುಗಡೆಯಾದ ಸಮಯದಲ್ಲಿ ಮೆಸ್ಕಾಂ ಇಲಾಖೆಗೆ ದೂರು ನೀಡಿದರೂ ಸ್ಪಂದಿಸುವುದಿಲ್ಲ, ವಿದ್ಯುತ್ ಕಡಿತಕ್ಕೆ ಯಾವುದೇ ರೀತಿಯಲ್ಲಿ ಮುನ್ಸೂಚನೆ ನೀಡುವುದಿಲ್ಲ, ಕರೆಂಟ್ ಹೋದರೆ ದೂರನ್ನು ಕೇಳುವವರೇ ಇಲ್ಲ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು. ಮೆಸ್ಕಾಂನ ಶಾಖಾಧಿಕಾರಿ ಶ್ರೀನಿವಾಸ ಮೂರ್ತಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.
ಆಧಾರ್ ನೋಂದಣಿ ಶೀಘ್ರ: ಆಧಾರ್ ನೋಂದಣಿಯನ್ನು ಅಂಗನವಾಡಿ ಕೇಂದ್ರದಲ್ಲಿಯೇ ಮಾಡಲಾಗುವುದು. ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ಸಹಾಯಕಿಯರಿಗೂ ಕೆಲವೊಮ್ಮೆ ಗ್ರಾಮ ಪಂಚಾಯತ್ ಸೂಚಿಸಿದ ಕೆಲಸಗಳನ್ನು ನಿರ್ವಹಿಸಲು ಅನಿವಾರ್ಯವಾಗುತ್ತದೆ. ಕೌಶಲ್ಯ ಯೋಜನೆಯಲ್ಲಿ ನೇರವಾಗಿ ಗ್ರಾಮ ಪಂಚಾಯತ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾವಣಿ ಮಾಡಲು ಸಾಧ್ಯವಿದೆ. ಇದಕ್ಕೆ ಕಾರ್ಯಕರ್ತರು ನೆರವು ನೀಡುತ್ತಾರೆ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಾಧುರಿ ಮಾಹಿತಿ ನೀಡಿದರು.
ಮಲೇರಿಯಾ ಮತ್ತು ಡೆಂಗ್: ಕಾರ್ನಾಡು ಗ್ರಾಮದ ಕೆ.ಎಸ್.ರಾವ್ ನಗರದಲ್ಲಿ ಮಲೇರಿಯಾ ತೀವ್ರವಾಗಿರುವುದರಿಂದ ಹೆಚ್ಚಿನ ಸಿಬ್ಬಂದಿಗಳು ಹಾಗೂ ಆರೋಗ್ಯ ಸಹಾಯಕಿಯರು ರಜೆ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಳೆಯಂಗಡಿ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಆದರೂ ಪರಿಸರ ಶುಚಿತ್ವಕ್ಕೆ ವಿಶೇಷ ಆದ್ಯತೆ ನೀಡಿ ಎಂದು ಕೆಮ್ರಾಲ್ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಚಂದ್ರಪ್ರಭಾ ಹೇಳಿದರು.
ಪಂಚಾಯತ್ ಅಧ್ಯಕ್ಷೆ ಜಲಜಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು ಜಿಪಂ, ತಾಪಂ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ್ ಜೆ.ಗ್ರಾಮ ಸಭೆಯನ್ನು ನಡೆಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ ಬೆರ್ನಾಡ್, ಎಚ್.ಹಮೀದ್, ಅಬ್ದುಲ್ ಬಶೀರ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಝೀರ್, ವಿನೋದ್‌ಕುಮಾರ್, ಸುಖೇಶ್, ಸುಗಂಧಿ, ಶರ್ಮಿಳಾ ಎನ್. ಕೋಟ್ಯಾನ್, ಅಶೋಕ್ ಬಂಗೇರ, ಚಿತ್ರಾ ಸುಖೇಶ್, ಗುಣವತಿ, ಮಾಲತಿ ಡಿ. ಕೋಟ್ಯಾನ್, ಇಂಜಿನಿಯರ್ ಪ್ರಶಾಂತ್ ಆಳ್ವಾ, ಅರಣ್ಯ ಇಲಾಖೆಯ ಎಂ.ಬಿ.ಶೇಷಪ್ಪ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿದರು, ಕಾರ್ಯದರ್ಶಿ ಕೇಶವ ದೇವಾಡಿಗ ವಂದಿಸಿದರು.ರಾಷ್ಟ್ರಗೀತೆಯೊಂದಿಗೆ ಗ್ರಾಮಸಭೆ ಸಮಾಪ್ತಿಗೊಂಡಿತು.







