ಹರೇಕಳ ಗ್ರಾಮ ಸಭೆಯಲ್ಲಿ ಗದ್ದಲ: ರದ್ದುಗೊಂಡ ಗ್ರಾಮ ಸಭೆ

ಕೊಣಾಜೆ, ಜು.10: ಹರೇಕಳ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಸೋಮವಾರ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಆದರೆ ಸಭೆಯ ಆರಂಭದಲ್ಲೇ ಗ್ರಾಮಸ್ಥರು ಕಳೆದ 17 ವರ್ಷಗಳ ಬೇಡಿಕೆಯಾದ ನಿವೇಶನ, ಸರ್ಕಾರಿ ಬಸ್ಸು ಸಂಚಾರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿ ಈ ಮೂರು ವಿಚಾರಗಳಲ್ಲಿ ಸ್ಪಷ್ಟ ಉತ್ತರ ನೀಡಿದ ಬಳಿಕ ಗ್ರಾಮಸಭೆ ನಡೆಸಿ ಎಂದು ಪಟ್ಟು ಹಿಡಿದರು. ಆರಂಭದಲ್ಲೇ ಕಾಡಿದ ವಿಘ್ನ ಕೊನೆವರೆಗೂ ನಿಲ್ಲದ ಕಾರಣ ಸಭೆಯನ್ನು ಮುಂದೂಡಿ ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆ ಗೀತಾ ಶಾನುಭೋಗ್ ತೀರ್ಮಾನ ಹೇಳಿದರು.
ಗ್ರಾಮಸ್ಥರ ಬೇಡಿಕೆಗಳಿಗೆ ಅನುಸಾರವಾಗಿ ಎಲ್ಲಾ ದಾಖಲೆಗಳನ್ನು ಅಧಿಕಾರಿ ಸಿದ್ಧಪಡಿಸಿದ ಬಳಿಕವೇ ಗ್ರಾಮಸಭೆ ಕರೆಯುವಂತೆಯೂ ನೋಡೆಲ್ ಅಧಿಕಾರಿಯ ಸೂಚನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿಯೂ ಬೆಂಬಲ ಸೂಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಅವರು ಸ್ವಾಗತಿಸುತ್ತಿದ್ದಂತೆಯೇ ಹಿಂದಿನ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನಗಳ ಕಥೆಯೇನಾಗಿದೆ, ಅಧಿಕಾರಿಗಳು ಎಲ್ಲರೂ ಬಂದಿದ್ದಾರೆಯೇ ಎಂದು ಸಿಪಿಐಎಂ ಮುಖಂಡ ಉಮರಬ್ಬ, ಡಿವೈಎಫ್‌ಐ ಮುಖಂಡ ರಫೀಕ್, ಎಸ್‌ಡಿಪಿಐನ ಬಶೀರ್ ಕೆದಕಿದರು.
ಇದಕ್ಕೆ ಪ್ರತಿಯಾಗಿ ಅಧಿಕಾರಿ ಮಾತನಾಡಿದಾಗ ಗ್ರಾಮಸ್ಥರು ಆಕ್ರೋಶಗೊಂಡರು. ಗ್ರಾಮಸ್ಥರಾದ ಶಿವರಾಮ, ಇಸ್ಮಾಯಿಲ್, ಫಾರೂಕ್ ಸಹಿತ ಇತರರು ಈ ವಿಚಾರದಲ್ಲಿ ಒಂದೊಂದೇ ಮಾಹಿತಿ ಬಹಿರಂಗಪಡಿಸಿದಾಗ ಹಾಜರಿದ್ದ ಗ್ರಾಮಸ್ಥರ ಜೊತೆ ಅಧಿಕಾರಿಗಳು, ಅಧ್ಯಕ್ಷೆಯೂ ತಬ್ಬಿಬ್ಬಾದರು. ಗ್ರಾಮದಲ್ಲಿ ಬಡವರಿಗೆ ನಿವೇಶನಕ್ಕಾಗಿ 17 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಪ್ರತೀ ಗ್ರಾಮಸಭೆಯಲ್ಲೂ ಭರವಸೆ ಮಾತ್ರ ನೀಡಲಾಗುತ್ತಿದೆ. ಕಳೆದ ಗ್ರಾಮಸಭೆಯಲ್ಲೂ ಭರವಸೆ ನೀಡಲಾಗಿದ್ದು, ಪಂಚಾಯತ್ ಮುಂದಿನ ಕ್ರಮ ಕೈಗೊಂಡಿಲ್ಲ. ಗ್ರಾಮದವರು ಸರ್ಕಾರಿ ಜಾಗದಲ್ಲಿ ಕಡ್ಡಿ ತುಂಡು ಮಾಡಿದರೂ ಆಡಳಿತ ವರ್ಗವೇ ಸ್ಥಳಕ್ಕೆ ಧಾವಿಸಿ ತಡೆ ನೀಡುತ್ತದೆ, ಆದರೆ ಮಂಜನಾಡಿ, ಉಳ್ಳಾಲ ಭಾಗದವರು ಬಂದು ಸರ್ಕಾರಿ ಜಮೀನು ಸಮತಟ್ಟು ಮಾಡಿ ಮನೆ ಕಟ್ಟಿದರೂ ಕ್ರಮ ಇಲ್ಲ. ಬದಲಿಗೆ ಮನೆನಂಬ್ರವೂ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಈ ವಿಚಾರ ತಮಗೆ ಗೊತ್ತಿಲ್ಲ ಎಂದು ಅಧ್ಯಕ್ಷೆ ಅನಿತಾ ಡಿಸೋಜ ಹೇಳಿದಾಗ ಇನ್ನಷ್ಟು ಆಕ್ರೋಶಗೊಂಡ ಗ್ರಾಮಸ್ಥರು, ಹರೇಕಳದಲ್ಲಿ ಪಂಚಾಯತ್ ಪ್ರತಿನಿಧಿಗಳ ಜೇಬು ತುಂಬಿದವರಿಗೆ ಕಾನೂನು ಇಲ್ಲ, ಬಡವರಿಗೆ ಮಾತ್ರ ಕಾನೂನು ಎಂದು ಕಿಡಿಕಾರಿದರು. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಕಾರಣ ಬಡವರು ಎರಡು ಬಸ್ಸುಗಳನ್ನು ಹಿಡಿದು ಇನೋಳಿಗೆ ಹೋಗಬೇಕಾಗಿದೆ. ಎಲ್ಯಾರ್‌ಗೆ ಹೋದರೆ ಇಲ್ಲಿ ಔಷಧ ಮುಗಿಯುತ್ತದೆ ಎಂದು ಹೇಳುತ್ತಾರೆ. ಗ್ರಾಮದಲ್ಲಿ ಪಿಎಚ್‌ಸಿ ಸ್ಥಾಪನೆ ನಿಟ್ಟಿನಲ್ಲಿ ಮೋಹನ್‌ದಾಸ್ ಶೆಟ್ಟಿ ಅಧ್ಯಕ್ಷರಾಗಿದ್ದ ಸಂದರ್ಭ ಬಾವಲಿಗುಲಿಯಲ್ಲಿ ಜಮೀನು ಗುರುತಿಸಿ ನಿರ್ಣಯಿಸಲಾಗಿತ್ತು. ನಮ್ಮದೇ ಶಾಸಕರು ಆರೋಗ್ಯ ಸಚಿವರಾದಾಗ ಆಸ್ಪತ್ರೆಯೇ ಆಗುತ್ತದೆ ಎಂದ ಪಂಚಾಯತ್ ಸದಸ್ಯರು ಈ ವಿಚಾರದಲ್ಲಿ ಮುಂದುವರಿಯದ ಕಾರಣ ಕನಿಷ್ಟ ಸರ್ಕಾರಿ ಮಟ್ಟದ ಕ್ಲಿನಿಕ್ ಆರಂಭವೂ ಆಗಿಲ್ಲ ಎಂದು ಆರೋಪಿಸಿದರು.
ಹರೇಕಳದಲ್ಲಿ ಬಸ್ಸುಗಳ ಕೊರತೆ ಹಿಂದಿನಿಂದಲೂ ಇದೆ, ಪರವಾನಿಗೆ ಇದ್ದರೂ ಬಸ್ಸುಗಳು ಸಂಚರಿಸುತ್ತಿಲ್ಲ, ಈ ಬಗ್ಗೆ ಕೇಳುವವರೂ ಇಲ್ಲ. ಸರ್ಕಾರಿ ಬಸ್ಸು ಆರಂಭಕ್ಕಾಗಿ ಹಲವು ಬಾರಿ ಮನವಿ ಮಾಡಲಾಗಿದ್ದರೂ ಪಂಚಾಯತ್ ಯಿಂದ ಯಾವುದೇ ಪ್ರಯತ್ನ ನಡೆದಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೂ ಗ್ರಾಮಸಭೆಗೆ ಬರುತ್ತಿಲ್ಲ. ಈ ಮೂರು ವಿಚಾರದಲ್ಲಿ ಸ್ಪಷ್ಟನೆ ನೀಡಿ. ನಿವೇಶನ ನೀಡಲು ಆಗದಿದ್ದರೆ, ನಾವೇ ಆ ಕೆಲಸ ಮಾಡ್ತೇವೆ. ನೀರಿನ ಸಂಪರ್ಕ ಕಲ್ಪಿಸಿದರೆ ಸಾಕು, ಈ ಬಗ್ಗೆ ಲಿಖಿತ ಪತ್ರ ನೀಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸಭೆ ಮುಂದುವರಿಸಬೇಕೇ, ಬೇಡವೇ?
ಪಂಚಾಯತ್ ಸದಸ್ಯರು, ಅಧ್ಯಕ್ಷೆ ಹಾಗೂ ಪಿಡಿಓ ಅವರ ಅಸಹಾಯಕತೆ ಪ್ರದರ್ಶನ, ಗ್ರಾಮಸ್ಥರ ಆಕ್ರೋಶ ಕಂಡ ನೋಡೆಲ್ ಅಧಿಕಾರಿ, ನೀವು ಮೂರು ಮುಖಗಳು ಸಭೆ ಬೇಡ ಎಂದರೆ ರದ್ದು ಮಾಡೋಣ, ಬೇಕು ಎಂದರೆ ಮುಂದುವರಿಸೋಣ ಎಂದರು. ಆರೋಗ್ಯ, ನಿವೇಶನ, ಬಸ್ಸಿನ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಬಳಿಕ ಸಭೆ ಮುಂದುವರಿಯಲಿ ಎಂದು ಗ್ರಾಮಸ್ಥರು ತಿಳಿಸಿದರು. ಆದರೆ ಈ ಮೂರೂ ವಿಚಾರಗಳಲ್ಲಿ ಯಾವುದೇ ಫಲಿತಾಂಶ ಸಿಗದ ಕಾರಣ ಗ್ರಾಮಸಭೆ ರದ್ದುಪಡಿಸಿ ಮುಂದೆ ಎಲ್ಲಾ ದಾಖಲೆಗಳೊಂದಿಗೆ ದಿನಾಂಕ ನಿಗದಿ ಬಗ್ಗೆ ನೋಡೆಲ್ ಅಧಿಕಾರಿ ಹಾಗೂ ಅಧ್ಯಕ್ಷೆ ತಿಳಿಸಿದರು.







