ಅಂಗಡಿಗೆ ವಿದ್ಯುತ್ ಸಂಪರ್ಕಕ್ಕೆ ಒತ್ತಾಯಿಸಿ ವಿಕಲಾಂಗ ವ್ಯಕ್ತಿಯಿಂದ ಉಪವಾಸ ಸತ್ಯಾಗ್ರಹ
ಉಳ್ಳಾಲ, ಜು.10: ಉಳ್ಳಾಲದ ಅಬ್ಬಕ್ಕ ಸರ್ಕಲ್‌ನ ಬಳಿ ಮೊಬೈಲ್ ರೀಚಾರ್ಜ್‌ನ ಗೂಡಂಗಡಿ ಹೊಂದಿರುವ ವಿಕಲಾಂಗ ಮುಹಮ್ಮದ್ ನೂರುಲ್ ಹಕ್ ಎಂಬವರು ತನ್ನ ಅಂಗಡಿಗೆ ವಿದ್ಯುತ್ ಸಂಪರ್ಕ ಒದಗಿಸಲು ನಿರಪೇಕ್ಷಣಾ ಪತ್ರ ನೀಡುವಂತೆ ಒತ್ತಾಯಿಸಿ ಉಳ್ಳಾಲ ನಗರಸಭೆಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಸೋಮವಾರದಿಂದ ಆರಂಭಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಉಳ್ಳಾಲದಲ್ಲಿ ನೆಲೆಸಿರುವ ಉತ್ತರ ಪ್ರದೇಶದ ಮೂಲದ ಮುಹಮ್ಮದ್ ನೂರುಲ್ ಹಕ್ ಅವರು ತನ್ನ ಪತ್ನಿ ಆಸಿಯಾ ಜೊತೆ ನಗರಸಭೆ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೂ ತನ್ನ ಅಂಗಡಿಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ಮಹಮ್ಮದ್ ಅವರು ಅಂದಿನ ಪುರಸಭಾ ಆಡಳಿತ ಸೌಧದ ಮುಂಬಾಗದಲ್ಲಿ ಸತ್ಯಾಗ್ರಹ ನಡೆಸಿದ್ದರು. ಅಂದು ಅಧಿಕಾರಿಗಳು ನೀಡಿದ್ದ ಭರವಸೆಯು ಈಡೇರದ ಕಾರಣ ಈಗ ಮತ್ತೆ ಸತ್ಯಾಗ್ರಹ ಅರಂಭಿಸಿದ್ದಾರೆ. ನಗರಸಭೆಯಿಂದ ವಿಕಲಾಂಗರಿಗೆ ಶೇಕಡಾ 3ರ ಯೋಜನೆಯಡಿ ಸಿಗುವ ಪೋಷಣಾ ಭತ್ಯೆ(6,000)ಯನ್ನು ಕೊಡದೆ ಸತಾಯಿಸುತ್ತಿರುವುದರ ವಿರುದ್ಧ ಮುಹಮ್ಮದ್ ಆಕ್ರೋಶಗೊಂಡಿದ್ದಾರೆ. ತನ್ನ ಹತ್ತಿರದ ಅನೇಕ ಅಂಗಡಿಯವರಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು, ತನಗೆ ಮಾತ್ರ ನಗರಸಭೆಯ ಭ್ರಷ್ಟ ಅಧಿಕಾರಿಗಳು ಸಂಪರ್ಕವನ್ನು ನೀಡುತ್ತಿಲ್ಲ. ಅಂಗವಿಕಲರ ಸಂಘದ ಅಧ್ಯಕ್ಷರಲ್ಲಿ ತಿಳಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ್ದಾರೆ.
ನಗರಸಭಾ ಕಛೇರಿ ಮುಂಭಾಗದಲ್ಲಿ ಸೋಮವಾರ ರಾತ್ರಿಯವರೆಗೂ ಮುಹಮ್ಮದ್ ಸತ್ಯಾಗ್ರಹವನ್ನು ಮುಂದುವರಿಸಿದ್ದು, ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ಕೈಬಿಡಲ್ಲವೆಂದು ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅನುಮತಿ ಬೇಕು: ಮುಹಮ್ಮದ್‌ರ ಅಂಗಡಿಯು ಲೋಕೋಪಯೋಗಿ ಇಲಾಖಾ ರಸ್ತೆಯ ಅಂಚಿನಲ್ಲಿರುವುದರಿಂದ ಅವರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಇಲಾಖೆಯ ನಿರಪೇಕ್ಷಣಾ ಪತ್ರ ಬೇಕು. ಶೇಕಡಾ ಮೂರರ ಪೋಷಣಾ ಭತ್ಯೆಯನ್ನು ನೀಡಲು ವಿಳಂಬವಾದ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ತಿಳಿಸಿದ್ದು, ಮುಹಮ್ಮದ್ ಅವರಿಗೆ ಸದ್ಯಕ್ಕೆ ನಗರಸಭೆಯಿಂದಲೇ 6,000 ರೂಪಾಯಿ ಪೋಷಣಾ ಭತ್ಯೆಯನ್ನು ನೀಡಲು ವ್ಯವಸ್ಥೆ ಮಾಡುವುದಾಗಿ ನಗರಸಭಾಧ್ಯಕ್ಷ ಹುಸೇನ್ ಕುಂಞಮೋನು ತಿಳಿಸಿದ್ದಾರೆ.





.jpg.jpg)



