ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತೀಯ ಗೂಂಡಾಗಳ ಗಡಿಪಾರು: ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಜು.10: ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಕೋಮು ಸೌಹಾರ್ದತೆ ಹಾಳು ಮಾಡುವಂತಹ ಮತೀಯವಾದಿಗಳ ವಿರುದ್ಧ ಕೋಕಾ ಕಾಯ್ದೆ, ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಗಡಿಪಾರು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಸೋಮವಾರ ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆಯ ಬಳಿಕ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿ ಮತೀಯ ಭಾವನೆ ಕೆರಳಿಸಿ ಶಾಂತಿಗೆ ಭಂಗ ತರುವವರು ಮತ್ತು ಸಮಾಜದ ಸ್ವಾಸ್ಥ ಕದಡುವವರು ಯಾರೇ ಆದರೂ, ಅವರು ಯಾವುದೇ ಸಂಘಟನೆಗೆ ಸೇರಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಹೇಳಿದರು.
ಮಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಎರಡು-ಮೂರು ತಿಂಗಳಿನಿಂದ ಕೆಲ ಅಹಿತಕರ ಘಟನೆಗಳು ನಡೆದಿವೆ. ಇದರಲ್ಲಿ, ಮತೀಯ ಸಂಘಟನೆಗಳ ಪಾತ್ರ ಇದೆ. ಆ ಸಂಘಟನೆಗಳು ಯಾವುದೇ ಧರ್ಮಕ್ಕೆ ಸೇರಿದ್ದರೂ ನಿರಂತರವಾದ ನಿಗಾ ಇಡಬೇಕು. ಮತೀಯ ಗೂಂಡಾಗಳ ಚಲನವಲನ ಗಮನಿಸುತ್ತಿರಬೇಕು. ಪದೇ ಪದೇ ಇಂಥ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಗೂಂಡಾ ಕಾಯ್ದೆ ಅನ್ವಯ ಕ್ರಮ ಕೈಗೊಂಡು ಗಡಿಪಾರು ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದರು.
ಕರಾವಳಿ ಭಾಗದ ಪರಿಸ್ಥಿತಿ ಕುರಿತು ವರದಿ ನೀಡುವಂತೆ, ಅದಕ್ಕೂ ಮುನ್ನ ಸಂಘಟನೆಗಳ ಪ್ರಮುಖರೊಂದಿಗೆ ಮಾತುಕತೆ, ಶಾಂತಿಸಭೆಗಳನ್ನು ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದ ಅವರು, ಕರಾವಳಿಯನ್ನು ಮತೀಯವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಮತೀಯ ಭಾವನೆ ಕೆರಳಿಸುವವರು ಮತ್ತು ಇಂಥ ಪ್ರಕರಣಗಳಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀರಾಮ ಸೇನೆ, ಪಿಎಫ್‌ಐ, ಬಜರಂಗದಳ, ಆರೆಸ್ಸೆಸ್, ಎಸ್‌ಡಿಪಿಐ ಸೇರಿದಂತೆ ಯಾವುದೇ ಸಂಘಟನೆ ಕೋಮು ಗಲಭೆಗೆ ಪ್ರಚೋದನೆ ನೀಡಿದರೆ ಕಠಿಣ ಕ್ರಮ ಜರಗಿಸಲಾಗುವುದು. ರೌಡಿ ಪಟ್ಟಿಯಲ್ಲಿರುವವರ ವಿರುದ್ಧ ಮುಲಾಜಿಲ್ಲದೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದ ಅವರು, ಮಂಗಳೂರು ಮತ್ತು ಉಡುಪಿ ಶಾಂತಿಗೆ ಹೆಸರಾದ ಪ್ರದೇಶ. ಇಂತಹ ಬೆಳವಣಿಗೆಗಳನ್ನು ಅಲ್ಲಿ ಕೊನೆಗಾಣಿಸಿ, ಶಾಂತಿ ನೆಲೆಸುವಂತೆ ಮಾಡಬೇಕು ಸಿದ್ದರಾಮಯ್ಯ ಹೇಳಿದರು.
ಕಾನೂನಿಗಿಂತ ದೊಡ್ಡವರಲ್ಲ: ನಿಷೇಧಾಜ್ಞೆ ಇದ್ದ ಸಂದರ್ಭದಲ್ಲಿ ಪ್ರತಿಭಟನೆ ಸೇರಿದಂತೆ ಯಾವುದೇ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಬಾರದು. ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಪ್ರತಿಯೊಂದು ಜಿಲ್ಲೆಗೂ ಒಬ್ಬೊಬ್ಬ ಎಡಿಜಿಪಿ ಅವರಿಗೆ ಹೊಣೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಧಿಕಾರಿಗಳಿಗೆ ಸಿಎಂ ಪ್ರಶ್ನೆ
ಕರಾವಳಿಯಲ್ಲಿ ಕೋಮುಗಲಭೆ ನಡೆಯುತ್ತಿದೆ. ನಿಲ್ಲಿಸಲು ಆಗಲ್ವಾ? ಕೋಮು ದಳ್ಳುರಿ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳುವವರ ಮೇಲೆ ಎಷ್ಟು ಪ್ರಕರಣ ಹಾಕಿದ್ದೀರಾ? ಕಲ್ಲು ತೂರಾಟ, ಲಾಠಿಚಾರ್ಜ್, ಹಲ್ಲೆ, ಕೊಲೆ ನಡೆಸಿದವರ ಪೈಕಿ ಎಷ್ಟು ಜನರನ್ನ ಬಂಧಿಸಿದ್ದೀರಾ? ಕರಾವಳಿಯಲ್ಲಿ ನಡೆದ ಗಲಭೆಯಲ್ಲಿ ರಾಜಕೀಯ ಮುಖಂಡರ ಕೈವಾಡ ಎಷ್ಟು? ಎಂದು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿ, ತಕ್ಷಣ ಈ ಬಗ್ಗೆ ವರದಿ ನೀಡಿ ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆನ್ನಲಾಗಿದೆ.
ಹೆಚ್ಚಾದ ಕೋಮುಗಲಭೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಮತೀಯ ಗಲಭೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಲ್ಲಿಸಿರುವ ವರದಿಯಲ್ಲಿ ಜೂ.30ರವರೆಗೂ ಬರೋಬ್ಬರಿ 25 ಕೋಮುಗಲಭೆ ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 2016ರಲ್ಲಿ 11, 2017(ಜೂ.30ವರೆಗೆ)10 ಪ್ರಕರಣಗಳು ನಡೆದಿವೆ. ಆದರೆ, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿ 2016ರಲ್ಲಿ 8, 2017(ಜೂ.30ವರೆಗೆ)ನಲ್ಲಿ 15 ಪ್ರಕರಣಗಳು ನಡೆದಿದ್ದು, ಕೋಮುಗಲಭೆಗಳು ಹೆಚ್ಚಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿ ಬಳಿಕ ಸಂಘಟನೆಗಳ ನಿಷೇಧ
ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವರದಿ ನೀಡಿದ ಬಳಿಕ ಕೆಲ ಸಂಘಟನೆಗಳನ್ನು ನಿಷೇಧಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.







