ಬರ್ಗರ್ ತಿನ್ನುವ ಸ್ಪರ್ಧೆಯಲ್ಲಿ ಗೆದ್ದವನ ಹೊಟ್ಟೆ ತೂತಾಯಿತು...!

ಹೊಸದಿಲ್ಲಿ, ಜು.10: ಪಶ್ಚಿಮ ದಿಲ್ಲಿಯ ರೆಸ್ಟೋರೆಂಟ್‌ನಲ್ಲಿ ಇತ್ತೀಚೆಗೆ ಸ್ಪರ್ಧೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಖಾರದ ಬರ್ಗರನ್ನು ಅತೀ ಹೆಚ್ಚು ತಿನ್ನುವ ವ್ಯಕ್ತಿಗೆ ಆ ರೆಸ್ಟೋರೆಂಟ್‌ನಲ್ಲಿ ಒಂದು ತಿಂಗಳಾವಧಿಯಲ್ಲಿ ಉಚಿತ ಊಟ ನೀಡುವುದಾಗಿ ಘೋಷಿಸಿತ್ತು. ಈ ಸ್ಪರ್ಧೆಯಲ್ಲಿ ಗರ್ವ್ ಗುಪ್ತ ಎಂಬ ವಿದ್ಯಾರ್ಥಿ ಗೆದ್ದಿದ್ದ. ಆದರೆ ಈ ಗೆಲುವು ತನಗೆ ಭಾರೀ ಹೊರೆಯಾಗಲಿದೆ ಎಂದು ಬಹುಷಃ ಆತ ಊಹಿಸಿರಲಿಲ್ಲ.
ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿ ಸಾಧ್ಯವಾದಷ್ಟು ಬರ್ಗರ್ ತಿಂದಿದ್ದೆ. ಮರುದಿನ ಹೊಟ್ಟೆ ತೊಳೆಸಿದಂತಾಗಿ ರಕ್ತ ಸಹಿತ ವಾಂತಿಯಾಯಿತು. ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ನನ್ನ ಹೊಟ್ಟೆಯ ಒಳಭಾಗದಲ್ಲಿ ಸೀಳು ಉಂಟಾಗಿರುವುದು ಪತ್ತೆಯಾಗಿದೆ. ಅತಿಯಾಗಿ ಖಾರದ ಬರ್ಗರ್ ತಿಂದ ಪರಿಣಾಮವಿದು ಎಂದು ವೈದ್ಯರು ತಿಳಿಸಿದ್ದಾರೆ. ಎಂಡೊಸ್ಕೊಪಿ ನಡೆಸಿದಾಗ ಹೊಟ್ಟೆಯ ಒಳಭಾಗದಲ್ಲಿ ಬಿರುಕುಂಟಾಗಿದ್ದು ಅದನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ದಿಲ್ಲಿ ವಿವಿಯ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಗುಪ್ತ ಹೇಳಿದ್ದಾರೆ.
ಅತಿಯಾದ ಖಾರ ತಿಂದರೆ ಆ್ಯಸಿಡಿಟಿ ಉಂಟಾಗುತ್ತದೆ. ಇದರ ಪರಿಣಾಮ ಹೊಟ್ಟೆಯ ಒಳಭಾಗದಲ್ಲಿ ಸೀಳು ಉಂಟಾಗಿದೆ. ಅತಿಯಾಗಿ ಮದ್ಯ ಸೇವಿಸಿದರೆ ಹೀಗಾಗುತ್ತದೆ. ಆದರೆ ಬರ್ಗರ್ ಸೇವಿಸಿ ಹೀಗಾಗಿರುವುದು ಇದೇ ಪ್ರಪ್ರಥಮ ಘಟನೆ ಎಂದು ಡಾ. ದೀಪ್ ಗೋಯಲ್ ಹೇಳಿದ್ದಾರೆ.





