ಹಾಜಿ ಅಬ್ದುಲ್ಲಾ ಸ್ಮಾರಕ ಆಸ್ಪತ್ರೆ ಖಾಸಗೀಕರಣ ವಿರೋಧ: ದಾವೆಯ ಮರುವಿಚಾರಣೆಗೆ ಹೆಚ್ಚುವರಿ ನ್ಯಾಯಾಲಯ ಆದೇಶ
ಉಡುಪಿ, ಜು.10: ನಗರದ ಹಾಜಿ ಅಬ್ದುಲ್ಲಾ ಸ್ಮಾರಕ ಹೆಂಗಸರ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ಸರಕಾರದ ಕ್ರಮವನ್ನು ವಿರೋಧಿಸಿ ದಾನಿಗಳ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸಲ್ಲಿಸಿರುವ ಮೇಲ್ಮನವಿಯನ್ನು ಪರಿಗಣಿಸಿರುವ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮರು ವಿಚಾರಣೆಗೆ ಒಳಪಡಿಸಬೇಕೆಂದು ಆದೇಶಿಸಿದ್ದಾರೆ.
ಹಾಜಿ ಅಬ್ದುಲ್ಲಾ ಸ್ಮಾರಕ ಆಸ್ಪತ್ರೆಯ ಖಾಸಗೀಕರಣದ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವ್ಯಾಜ್ಯಕ್ಕೆ ಸಕಾರಣವಿಲ್ಲವೆಂದು ಪರಿಗಣಿಸಿ ವಜಾ ಮಾಡಲಾಗಿತ್ತು.
ಈ ಆದೇಶದ ವಿರುದ್ಧ ಹಾಜಿ ಅಬ್ದುಲ್ಲಾ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಡುಪಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿವೇಕಾನಂದ ಎಸ್. ಪಂಡಿತ್ ಅವರು ವಜಾ ಮಾಡಲಾದ ದಾವೆಯನ್ನು ಪುನರ್ ತನಿಖೆಗೆ ಒಳಪಡಿಸಬೇಕೆಂದು ಆದೇಶಿಸಿದ್ದಾರೆ.
ವಾದಿಗಳ ಪರವಾಗಿ ಹಿರಿಯ ನ್ಯಾಯವಾದಿ ಎನ್. ಕೃಷ್ಣರಾಜ್ ಆಚಾರ್ಯ ನ್ಯಾಯಾಲಯದಲ್ಲಿ ವಾದಿಸಿದ್ದರು.
ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು ತನ್ನ ನಂತರವೂ ಈ ಆಸ್ಪತ್ರೆ ನಿರಂತರವಾಗಿ ಬಡಜನರ ಸೇವೆ ಮುಂದುವರಿಸಬೇಕೆಂಬ ದೃಷ್ಟಿಯಿಂದ ಸುಮಾರು 1924-25ರ ಅವಧಿಯಲ್ಲಿ ಆಸ್ಪತ್ರೆ ಕಟ್ಟಡ ಮತ್ತು ಜಾಗಗಳನ್ನು ಅಂದಿನ ಉಡುಪಿ ತಾಲೂಕು ಬೋರ್ಡ್‌ಗೆ ಶರ್ತಗಳ ಮೇರೆಗೆ ಉಚಿತವಾಗಿ ಹಸ್ತಾಂತರಿಸಿದ್ದರು. ನಂತರ ಉಡುಪಿ ತಾಲೂಕು ಬೋರ್ಡ್ 1932ರಲ್ಲಿ ರಿಜಿಸ್ಟರ್ಡ್ ದಾಖಲೆ ಪ್ರಕಾರ ನಿರ್ದಿಷ್ಟವಾದ ಶರ್ತಗಳ ಮೇರೆಗೆ ಅಂದಿನ ಮದ್ರಾಸ್ ಸರಕಾರದ ಸುಪರ್ದಿಗೆ ನೀಡಿದ್ದರು. ಶರ್ತಗಳ ಪ್ರಕಾರ ಮುಖ್ಯವಾಗಿ ಈ ಆಸ್ಪತ್ರೆ ಎಂದೆಂದೂ ಬಡಜನರ ಉಚಿತ ಸೇವೆಗಾಗಿ ಇರುವ ಸರಕಾರಿ ಆಸ್ಪತ್ರೆ ಯಾಗಿ ಮುಂದುವರಿಯಬೇಕು ಮತ್ತು ಆಸ್ಪತ್ರೆಯ ಹೆಸರನ್ನು ಯಾವತ್ತೂ ಬದಲಾಯಿಸಬಾರದು. ಇದೇ ರೀತಿಯಲ್ಲಿ ಈ ಆಸ್ಪತ್ರೆ ಕಳೆದ ಸುಮಾರು 85 ವರ್ಷಗಳಿಂದ ಬಡವರಿಗೆ ಸೇವೆ ಸಲ್ಲಿಸುತ್ತಿತ್ತು.







