ಪ್ರಮೋದ್ ಮಧ್ವರಾಜ್ ಬಡಾವಣೆ ಹೆಸರು ಬದಲಾಯಿಸಲು ಆಗ್ರಹ
ಉಡುಪಿ, ಜು.10: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೊಡಂಕೂರಿನಲ್ಲಿ ಸರಕಾರದ ಎಲ್ಲ ಸವಲತ್ತುಗಳನ್ನು ಪಡೆದು ವಲಸೆ ಕಾರ್ಮಿಕರಿಗಾಗಿ ನಿರ್ಮಿಸಿರುವ ಬಡವಾಣೆಗೆ ಸಚಿವ ಪ್ರಮೋದ್ ಮಧ್ವರಾಜ್ ಅವರ ಹೆಸರು ಇಟ್ಟಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಹಾಗೂ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರಿಲ್ಲದವರಿಗೆ ಸೂರು ನೀಡಿರುವುದು ಶ್ಲಾಘನೀಯ. ಸಚಿವರು ತಮ್ಮದೇ ಖರ್ಚಿನಲ್ಲಿ ಬಡಾವಣೆ ನಿರ್ಮಿಸಿ ತಮ್ಮ ಹೆಸರು ಇಟ್ಟುಕೊಂಡಿದ್ದರೆ ಯಾರದ್ದು ಆಕ್ಷೇಪ ಇರುತ್ತಿರಲಿಲ್ಲ. ಆದರೆ ಜನರ ತೆರಿಗೆ ಹಣವನ್ನು ಪಡೆದು ಸರಕಾರದ ಯೋಜನೆಗಳ ಮೂಲಕ ಮಾಡಿದ ಬಡಾವಣೆಗೆ ತಮ್ಮ ಹೆಸರು ಇಟ್ಟಿರುವುದು ಸಮಂಜವಲ್ಲ. ಕೂಡಲೇ ಈ ಬಡಾವಣೆಯ ಹೆಸರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಪತ್ನಿ ಭಾಗವಹಿಸಿರುವುದು ಶಿಷ್ಟಾಚಾರದ ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನಿಸಿರುವ ಅವರು, ಉನ್ನತ ಮಟ್ಟದ ಜವಾಬ್ದಾರಿ ಹೊಂದಿರುವ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಉಡುಪಿ ಜಿಲ್ಲೆಯನ್ನು ಅಭಿವೃದ್ದಿ ಪಡಿಸುವ ಅವಕಾಶಗಳಿತ್ತು. ಆದರೆ ಉಡುಪಿ ಜಿಲ್ಲೆಗೆ ಅವರ ಸಾಧನೆ ಮಾತ್ರ ಶೂನ್ಯ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ವಿಜಯ ಭಟ್, ರಿಕೇಶ್ ಪಾಲನ್ ಉಪಸ್ಥಿತರಿದ್ದರು.







