ರಾಜ್ಯದಲ್ಲಿ ಶೇ.40ರಷ್ಟು ಮಳೆ ಕೊರತೆ: ಟಿ.ಬಿ.ಜಯಚಂದ್ರ

ಬೆಂಗಳೂರು, ಜು.10: ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಶೇ.35 ರಿಂದ 40ರಷ್ಟು ಮಳೆ ಕೊರತೆಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 20 ದಿನಗಳಿಂದ ಮಳೆಯಾಗಿಲ್ಲ. ಇನ್ನೂ 10 ದಿನಗಳ ಕಾಲ ಮಳೆ ಆಗುವ ಸಾಧ್ಯತೆಗಳಿಲ್ಲ ಎಂದು ಹವಾಮಾನ ತಜ್ಞರು ವರದಿ ನೀಡಿದ್ದಾರೆ ಎಂದರು.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಬರಗಾಲದ ಕುರಿತು ಘೋಷಣೆ ಮಾಡುವುದು ಅನಿವಾರ್ಯ. ಸತತವಾಗಿ ಒಂದು ತಿಂಗಳು ಮಳೆ ಆಗದಿದ್ದರೆ, ಬರಗಾಲವನ್ನು ಘೋಷಿಸಬಹುದಾಗಿದೆ ಎಂದು ಜಯಚಂದ್ರ ಹೇಳಿದರು.
ಮಳೆ ಕೊರತೆಯಿಂದಾಗಿ ಮೋಡ ಬಿತ್ತನೆಗೆ ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿಯೂ ಚರ್ಚೆ ನಡೆಸಲಾಗಿದೆ. ಮೋಡ ಬಿತ್ತನೆಗಾಗಿ 30 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಆದರೆ, ಮೋಡ ಬಿತ್ತನೆಗೆ ಪೂರಕವಾದ ಮೋಡಗಳೆ ಇಲ್ಲವಾಗಿವೆ ಎಂದು ಅವರು ತಿಳಿಸಿದರು.
ಕಾವೇರಿ ನದಿ ಹಂಚಿಕೆ ವಿವಾದದ ವಿಚಾರಣೆಯು ನಾಳೆಯಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ರಾಜ್ಯದ ಪರವಾಗಿ ವಾದ ಮಂಡಿಸಲು ಕಾನೂನು ತಂಡವು ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದ ಪರ ವಕೀಲ ಫಾಲಿ ಎಸ್.ನಾರಿಮನ್ ಜೊತೆ ಈಗಾಗಲೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಜಯಚಂದ್ರ ಹೇಳಿದರು.





