ಟೊಮೆಟೊ ಇನ್ನೂ ಕೆ.ಜಿ.ಗೆ 60-75 ರೂ.!

ಹೊಸದಿಲ್ಲಿ,ಜು.10: ಕರ್ನಾಟಕ,ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಂತಹ ಪ್ರಮುಖ ಉತ್ಪಾದನಾ ರಾಜ್ಯಗಳಲ್ಲಿ ಮಳೆಯಿಂದಾಗಿ ಬೆಳೆಗೆ ಹಾನಿಯಾಗಿರುವುದರಿಂದ ದೇಶದೆಲ್ಲೆಡೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಗ್ರಾಹಕರು ಟೊಮೆಟೊ ಪ್ರತಿ ಕೆ.ಜಿ.ಗೆ 60ರಿಂದ 75 ರೂ.ಗಳನ್ನು ತೆರುತ್ತಿದ್ದಾರೆ.
ಆದರೆ ಕೆಲವು ರಾಜ್ಯಗಳಲ್ಲಿ ಮಳೆಯ ಪ್ರಮಾಣ ಕುಗ್ಗತೊಡಗಿದ್ದು, ಮುಂದಿನ ದಿನಗ ಳಲ್ಲಿ ಹೆಚ್ಚಿನ ಟೊಮೆಟೊ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
ಕಳೆದೆರಡು ವಾರಗಳಿಂದ ಟೊಮೆಟೊ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಕೆ.ಜಿ.ಗೆ ಕೋಲ್ಕತಾದಲ್ಲಿ 75 ರೂ.,ದಿಲ್ಲಿಯಲ್ಲಿ 70 ರೂ.,ಚೆನ್ನೈನಲ್ಲಿ 60 ರೂ. ಮತ್ತು ಮುಂಬೈನಲ್ಲಿ 59 ರೂ.ಗೆ ಮಾರಾಟವಾಗುತ್ತಿದೆ.
ಕರ್ನಾಟಕದಂತಹ ಪ್ರಮುಖ ಉತ್ಪಾದನಾ ರಾಜ್ಯಗಳಲ್ಲಿ ಮಳೆಯಿಂದಾಗಿ ಬೆಳೆಗೆ ಹಾನಿಯಾಗಿರುವ ಜೊತೆಗೆ ಸಾಗಾಣಿಕೆಗೂ ಸಮಸ್ಯೆಯಾಗಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕ ಎ.ಕೆ.ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
2016-17(ಜುಲೈ-ಜೂನ್)ನೇ ಸಾಲಿನಲ್ಲಿ ದೇಶದಲ್ಲಿ ಟೊಮೆಟೊ ಉತ್ಪಾದನೆ ಶೇ.15ರಷ್ಟು ಹೆಚ್ಚಳದೊಂದಿಗೆ 187 ಲಕ್ಷ ಟನ್‌ಗಳಾಗಲಿದೆ ಎಂದು ಸರಕಾರವು ಅಂದಾಜಿಸಿದೆ





