ಭಿನ್ನಮತೀಯರು ಬೇರೆ ದಾರಿ ಹುಡುಕಿಕೊಳ್ಳಿ: ಬಿ.ಎಸ್.ವೈ

ತುರುವೇಕೆರೆ, ಜು.10: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಸಾಲೆ ಜಯರಾಮ್ ಅವರೇ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಅವರಿಗೆ ಸಹಕಾರ ನೀಡಿ ಪಕ್ಷದ ಗೆಲುವಿಗೆ ಶ್ರಮಿಸುವವರು ಪಕ್ಷದಲ್ಲಿರಬಹುದು, ಭಿನ್ನಾಭಿಪ್ರಾಯ ಸೃಷ್ಟಿಸಿ ಪಕ್ಷಕ್ಕೆ ಹಾನಿಯುಂಟು ಮಾಡುವವರು ಬಿಜೆಪಿ ಪಕ್ಷದಿಂದ ನಿವೃತ್ತಿ ಪಡೆದು ಬೇರೆ ದಾರಿ ಹುಡುಕಿಕೊಳ್ಳಿ, ಗೊಂದಲವನ್ನುಂಟು ಮಾಡಬೇಡಿ ಎಂದು ಭಿನ್ನಮತೀಯರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಶ್ರೀ ಗುರುಸಿದ್ಧರಾಮೇಶ್ವರ ಭವನದಲ್ಲಿ ಏರ್ಪಡಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿ, ಬಿಜೆಪಿ ಮಹಾಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಸಂಸ್ಕೃತಿ, ಕೆಟ್ಟ ನಡವಳಿಕೆ, ಭಿನ್ನಮತಿಯ ಚಟುವಟಿಕೆ ಬಿಜೆಪಿಯಲ್ಲಿ ಸಾಧ್ಯವಿಲ್ಲ. ಮಾಧ್ಯಮಗಳೆದರು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆಗಳನ್ನು ನೀಡುವ ಭಿನ್ನಮತೀಯರ ಅಗತ್ಯ ಬಿಜೆಪಿಗೆ ಇಲ್ಲ ಎಂದರು.
ಅನ್ನಭಾಗ್ಯ ಯೋಜನೆ ಕೇಂದ್ರದ ಬಿಜೆಪಿ ಸರಕಾರದ್ದು: ರಾಜ್ಯ ಕಾಂಗ್ರೆಸ್ ಸರಕಾರ ನಮ್ಮ ಯೋಜನೆ ಎಂದು ಹೇಳಿಕೊಳ್ಳುತ್ತಿರುವ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಪ್ರಮಾಣ ನೆರವನ್ನು ನೀಡಿ ಬಡವರ ಹಸಿವನ್ನು ನೀಗಿಸುತ್ತಿರುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ. ಪ್ರತಿ ಕೆ.ಜಿ.ಗೆ 32ರೂ. ನಂತೆ 1.65ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿಸಿ ಕರ್ನಾಟಕ ರಾಜ್ಯಕ್ಕೆ 3ರೂ.ನಂತೆ,ಕೆ.ಜಿ.ಗೆ 22ರೂ.ನಂತೆ 65ಮೆಟ್ರಿಕ್ ಟನ್ ಗೋಧಿ ಖರೀದಿಸಿ 2ರೂ.ಗೆ ರಾಜ್ಯಕ್ಕೆ ನೀಡುತ್ತಿದೆ. ಸಿದ್ದರಾಮಯ್ಯ ಇದರ ಲಾಭ ಪಡೆದು ಅನ್ನಭಾಗ್ಯ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದರು.
ಜಿಎಸ್‌ಟಿ ಇಂದ ದೇಶದ ಆದಾಯ ಹೆಚ್ಚಳ: ಹಿಂದಿನ ಯುಪಿಎ ಸರಕಾರದ 10ವರ್ಷಗಳ ಅವಧಿಯಲ್ಲಿ ದೇಶದ ಆದಾಯ ಕೇವಲ 1ಲಕ್ಷ ಮಾತ್ರ ಹೆಚ್ಚಳವಾಗಿತ್ತು.ಆದರೆ ಜುಲೈ 1ರಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿ ಇಂದಾಗಿ ದೇಶದ ಆದಾಯ 19ಕೋಟಿ ಹೆಚ್ಚಳವಾಗುವ ನಿರೀಕ್ಷೆ ಇದೆ. ದೇಶದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ತೆರಿಗೆ ವಂಚಿಸುವವರಿಗೆ ಕ್ಷಮೆ ಇಲ್ಲ, ಶಿಕ್ಷೆ ಖಚಿತ ಎಂಬುದನ್ನು ಮೋದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜಿಎಸ್‌ಟಿಯಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗೆ ಸಾಕಷ್ಟು ಲಾಭವಾಗಲಿದ್ದು, ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯಾಣ ದರವನ್ನು ಇಳಿಕೆ ಮಾಡಬೇಕೆಂದು ರಾಜ್ಯ ಸರಕಾರವನ್ನು ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್, ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ,ರುದ್ರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ದುಂಡರೇಣುಕಯ್ಯ, ಜಿಪಂ ಮಾಜಿ ಅಧ್ಯಕ್ಷ ಹುಚ್ಚಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಎಸ್‌ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಉಮಾರಾಜ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಂಗಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು.







