ಎನ್‌ಐಎ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ: ಟಿ.ಬಿ.ಜಯಚಂದ್ರ
ಕರಾವಳಿ ಜಿಲ್ಲೆಗಳಲ್ಲಿನ ಹತ್ಯೆ ಪ್ರಕರಣ
.jpg)
ಬೆಂಗಳೂರು, ಜು.10: ಕರಾವಳಿ ಜಿಲ್ಲೆಗಳಲ್ಲಿ ನಡೆದಿರುವ ಕೊಲೆ ಪ್ರಕರಣಗಳ ತನಿಖೆಯನ್ನು ಬಿಜೆಪಿ ಆಗ್ರಹಿಸಿದಂತೆ ಎನ್‌ಐಎಗೆ ವಹಿಸುವ ಅಗತ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣಗಳ ತನಿಖೆ ನಡೆಸಲು ನಮ್ಮ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ. ಆದುದರಿಂದ, ಈ ಸಂಬಂಧ ಎನ್‌ಐಎಗೆ ತನಿಖೆಯ ಜವಾಬ್ದಾರಿವಹಿಸುವ ಅಗತ್ಯವಿಲ್ಲ ಎಂದರು.
ಕೋಮುಗಲಭೆಗಳನ್ನು ಸೃಷ್ಟಿ ಮಾಡುವ ಬಗ್ಗೆ ಕಾಂಗ್ರೆಸ್ ಯಾವತ್ತೂ ಯೋಚನೆ ಮಾಡಿಲ್ಲ. ಆದರೆ, ಬಿಜೆಪಿ ಅದನ್ನೆ ಬಂಡವಾಳ ಮಾಡಿಕೊಂಡಿದೆ. ಚುನಾವಣೆಗಾಗಿ ಈ ಬಿಜೆಪಿ ಕೋಮುಗಲಭೆಗೆ ಕಾರಣವಾಗಿದೆ. ಗಲಭೆಗೆ ಕಾರಣ ಆದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಸರಕಾರ ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿದರು.
‘ನೈಸ್ ಅಕ್ರಮ’ ಸದನ ಸಮಿತಿ ಶಿಫಾರಸ್ಸು ಜಾರಿ: ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ಸದನ ಸಮಿತಿಯಿಂದ ಬಹಳಷ್ಟು ಸಭೆಗಳನ್ನು ನಡೆಸಲಾಗಿದೆ. ಸಮಿತಿ ನೀಡಿರುವ ವರದಿಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ವರದಿಯು ಸರಕಾರದ ಮುಂದಿದ್ದು, ಶೀಘ್ರವೇ ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಜಯಚಂದ್ರ ತಿಳಿಸಿದರು.
ನೈಸ್ ರಸ್ತೆಯಲ್ಲಿನ ಟೋಲ್ ದರ ಹೆಚ್ಚಳದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮೂಲ ಒಪ್ಪಂದದ ಪ್ರಕಾರ ದರ ಹೆಚ್ಚಳ ಮಾಡುವಂತಿಲ್ಲ. ಟೋಲ್ ದರವನ್ನು ಹೆಚ್ಚಳ ಮಾಡುವ ಮುನ್ನ ನೈಸ್ ಸಂಸ್ಥೆ ಸರಕಾರದ ಅನುಮತಿಯನ್ನು ಕೇಳಿಲ್ಲ. ಹೀಗಾಗಿ, ಸರಕಾರದಿಂದ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.







