ಕೇಂದ್ರ ಸರಕಾರ ರೈತರ ಜೀವ ಉಳಿಸಲಿ: ವಿನಯಕುಮಾರ್ ಸೊರಕೆ
.jpg)
ಹಿರಿಯಡ್ಕ, ಜು.10: ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಅವರ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಕೂಡಲೇ ಕೇಂದ್ರ ಸರಕಾರ ರೈತರ ಸಹಾಯಕ್ಕೆ ಬಂದು ಅವರ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರದ ರೈತ ಹಾಗೂ ಜನ ವಿರೋಧಿ ನೀತಿಯನ್ನು ವಿರೋಧಿಸಿ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಿರಿಯಡ್ಕ ಪೇಟೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಆಧಾರ್ ನಿರಾಧಾರ್ ಹೇಳುತ್ತಿದ್ದ ನರೇಂದ್ರ ಮೋದಿ ಈಗ ಜಾನುವಾರುಗಳಿಗೂ ಆಧಾರ್ ಕಡ್ಡಾಯ ಮಾಡಲು ಹೊರಟಿದ್ದಾರೆ. ಜಿಎಸ್‌ಟಿಯಲ್ಲಿ ಶೇ.18ಕ್ಕಿಂತ ಹೆಚ್ಚು ತೆರಿಗೆ ವಿಧಿಸಬಾರದೆಂದು ಈ ಹಿಂದಿನ ಯುಪಿಎ ಸರಕಾರ ನಿರ್ಧರಿಸಿದ್ದರೆ, ಈಗಿನ ಬಿಜೆಪಿ ಸರಕಾರ ಗರಿಷ್ಠ ಶೇ.28 ತೆರಿಗೆಯನ್ನು ವಿಧಿಸುತ್ತಿದೆ ಎಂದು ಆರೋಪಿಸಿದರು. ದಲಿತರ ಮನೆಗಳಿಗೆ ಭೇಟಿ ನೀಡುವ ಯಡಿಯೂರಪ್ಪ ಹೊರಗಿನ ಉಪಹಾರ ತಂದು ಸೇವಿಸುತ್ತಾರೆ. ಇವರಿಗೆ ದಲಿತರ ಮನೆಯ ಊಟ ಬೇಡ. ರಾಜಕೀಯ ಕಾರಣಕ್ಕೆ ಈ ರೀತಿಯ ನಾಟಕ ಆಡುತ್ತಿದ್ದಾರೆ ಎಂದು ಗೋಪಾಲ ಭಂಡಾರಿ ಕಟುವಾಗಿ ಟೀಕಿಸಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಮಾಜಿ ಶಾಸಕ ಯು. ಆರ್.ಸಭಾಪತಿ, ಮಂಗಳೂರು ವಿವಿ ಸೆನೆಟ್ ಸದಸ್ಯ ಅಮೃತ್ ಶೆಣೈ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಹೆಗ್ಡೆ, ನವೀನ್ ಚಂದ್ರ, ಜಿಪಂ ಸದಸ್ಯೆ ಚಂದ್ರಿಕಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಮಲ್ಪೆ ರಾಘವೇಂದ್ರ ಮೊದ ಲಾದವರು ಉಪಸ್ಥಿತರಿದ್ದರು.







