ಲಂಚ ಸ್ವೀಕಾರ ಪ್ರಕರಣ: ಅಪರಾಧಿಗೆ 4 ವರ್ಷ ಕಠಿಣ ಸಜೆ
ಮಂಗಳೂರು, ಜು.10: ದಕ್ಷಿಣ ಕನ್ನಡ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಲಂಚ ಸ್ವೀಕರಿಸಿದ ಅಪರಾಧಕ್ಕೆ ಸೋಮವಾರ ಮಂಗಳೂರಿನ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಡೇವಿಡ್ ಅಂಟೋನಿ ಕ್ರೂಸ್ ಶಿಕ್ಷೆಗೊಳಗಾದ ಅಪರಾಧಿ.
ಜನವರಿ 2012ರಲ್ಲಿ ರಾಮಚಂದ್ರ ಎಂಬವರಿಂದ ದಂಡ ಕಡಿತೊಳಿಸುವುದಾಗಿ ಹೇಳಿ 8 ಸಾವಿರ ರೂ. ಲಚದ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ಅಂದಿನ ಲೋಕಾಯುಕ್ತ ಇನ್‌ಸ್ಪೆಕ್ಟರ್ ಉದಯ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ವಿಚಾರಣೆ ನಡೆಸಿದ್ದರು. ಭ್ರಷ್ಟ ನಿಗ್ರಹ ಕಾಯಿದೆಯ ಕಲಂ 7ರ ಅಡಿಯಲ್ಲಿ ಎಸಗಿದ ತಪ್ಪಿಗೆ 2 ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ, ಕಲಂ 13(1) ಅಡಿಯಲ್ಲಿಎಸಗಿದ ತಪ್ಪಿಗೆ 2 ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.







