ಮೋದಿ-ಕ್ಸಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ: ಚೀನಾ ಸ್ಪಷ್ಟನೆ

ಬೀಜಿಂಗ್,ಜು.10: ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲವೆಂದು ಚೀನಾ ಸೋಮವಾರ ಸ್ಪಷ್ಟಪಡಿಸಿದೆ.
ಭಾರತ ಕೂಡಾ ಹ್ಯಾಂಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಉಭಯ ನಾಯಕರ ನಡುವೆ ನಡೆದ ಮಾತುಕತೆಯನ್ನು ದ್ವಿಪಕ್ಷೀಯ ಮಾತುಕತೆಯೆಂದು ಬಣ್ಣಿಸಿರಲಿಲ್ಲವಾದರೂ, ಇಬ್ಬರೂ ಕೂಡಾ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರೆಂದು ತಿಳಿಸಿತ್ತು. ಮೋದಿ ಹಾಗೂ ಕ್ಸಿಜಿನ್ ಪಿಂಗ್ ಅವರ ನಡುವಿನ ಮಾತುಕತೆಯು ಸುಮಾರು ಐದು ನಿಮಿಷಗಳವರೆಗೆ ನಡೆದಿದ್ದಾಗಿ ತಿಳಿಸಿತ್ತು.
ಈ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಸೋಮವಾರ ಹೇಳಿಕೆಯೊಂದನ್ನು ನೀಡಿ, ಉಭಯ ದೇಶಗಳ ನಾಯಕರು ಯಾವುದೇ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿಲ್ಲವೆಂದು ತಿಳಿಸಿದ್ದಾರೆ.
ಜಿ20 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಬ್ರಿಕ್ಸ್ ನಾಯಕರ ಔಪಚಾರಿಕ ಸಭೆಯ ಅಧ್ಯಕ್ಷತೆಯನ್ನು ಚೀನಾ ಅಧ್ಯಕ್ಷ ಕ್ಸಿ ಅವರು ವಹಿಸಿದ್ದರು. ಭಾರತದ ಪ್ರಧಾನಿ ಮೋದಿ ಹಾಗೂ ಬ್ರಿಕ್ಸ್ ದೇಶಗಳ ಇತರ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸ್ದಿರು ಎಂದು ಶುವಾಂಗ್ ತಿಳಿಸಿದರು.
ಸಿಕ್ಕಿಂ ಸಮೀಪದ ಡೋಕಾ ಲಾ ಗಡಿಯಲ್ಲಿ ಉಂಟಾಗಿರುವ ಸೇನಾ ಉದ್ವಿಗ್ನತೆ ಕೊನೆಗೊಳ್ಳಬೇಕಾದರೆ ಭಾರತವು ತನ್ನ ಗಡಿಭಾಗದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಲ್ಲಿ ಮಾತ್ರ ಉಭಯದೇಶಗಳ ನಡುವೆ ಅರ್ಥಪೂರ್ಣಮಾತುಕತೆ ಸಾಧ್ಯವೆಂದು ಶುವಾಂಗ್ ತಿಳಿಸಿದರು.







